ಹಿಂದು ಅರ್ಚಕನೊಬ್ಬ ಇಲ್ಲಿನ ಸಿಂದ್ ಪ್ರಾಂತ್ಯದ ಕಾಳಿ ಮಂದಿರದಲ್ಲಿ ಕಾಳಿದೇವಿಯನ್ನು ಸಂತೃಪ್ತಿಗೊಳಿಸುವ ಸಲುವಾಗಿ ತನ್ನ ಮೂವರು ಆರು ವರ್ಷದೊಳಗಿನ ಹೆಣ್ಣುಮಕ್ಕಳನ್ನು ಬಲಿ ಕೊಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಪೋಲೀಸರು ಹಾಗೂ ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾಳಿ ಮಾತೆಯ ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳು ಪ್ರತಿದಿನವೂ ನಡೆಯುತ್ತಿತ್ತು. ಭೀಮೋಮಲ್ ಎಂಬಲ್ಲಿ ಅರ್ಚಕ ತೇಕಂ ಮೆಘವರ್ ಅವರಿಗೆ ಸೇರಿದ್ದ ಮನೆಯಲ್ಲಿ ಮೊದಲ ಮಹಡಿಯಲ್ಲಿ ದೇವಸ್ಥಾನ ಸ್ಥಾಪಿಸಲಾಗಿತ್ತು. ಈ ದೇವಸ್ಥನದಲ್ಲಿ ತನ್ನ ಮೂವರು ಮಕ್ಕಳಾದ ಪಾರ್ವತಿ (6 ವರ್ಷ), ರೀನಾ (4 ವರ್ಷ), ಆರತಿ (1 ವರ್ಷ) ಅವರನ್ನು ದೇವಸ್ಥಾನಕ್ಕೆ ಕರೆದೊಯ್ದು. ಅವರನ್ನು ಹರಿತವಾದ ಕತ್ತಿಯ ಮೂಲಕ ಕತ್ತರಿಸಿ ತಾನು ತನ್ನ ಕತ್ತನ್ನು ಕುಯ್ದುಕೊಂಡ ಎನ್ನಲಾಗಿದೆ.
ತೇಕಂ ಅವರ ಸಹೋದರ ಮೌಲ್‌ಚಂದ್ ಹೇಳುವ ಪ್ರಕಾರ, ನನ್ನ ಅಣ್ಣ ದಿನವಿಡೀ ಕಾಳಿ ಮಾತೆಯ ದೇವಸ್ಥಾನದಲ್ಲಿ ಪೂಜೆಯ ಕಾರ್ಯದಲ್ಲೇ ಮಗ್ನರಾಗಿರುತ್ತಿದ್ದರು. ರಾತ್ರಿಯೂ ಪೂಜೆ ನಡೆಸುತ್ತಿದ್ದರು. ಮೊನ್ನೆ ಬೆಳಗ್ಗಿನ ಜಾವವೇ ಕರೆಂಟು ಹೋಗಿತ್ತು. ಈ ಸಂದರ್ಭ ಕಾಳಿ ಮಾತೆಯನ್ನು ಪ್ರಸನ್ನಗೊಳಿಸಲು ಈ ಕೃತ್ಯ ನಡೆಸಿದ್ದಾನೆ ಎಂದಿದ್ದಾರೆ.
ಈ ಸಂದರ್ಭ ಮೊದಲೇ ಯೋಜನೆ ರೂಪಿಸಿಕೊಂಡಿದ್ದ ಅರ್ಚಕ ತೇಕಂ ಅದೇ ಕಟ್ಟಡದಲ್ಲಿರುವ ತನ್ನ ಮನೆಗೆ ಬಂದು ಹೆಂಡತಿ ಪವಿಯ ಬಳಿ ಪಕ್ಕದ ಅಂಗಡಿಗೆ ಹೋಗಿ ಹಾಲು ತಾ ಎಂದು ಹೇಳಿದ್ದ ಎನ್ನಲಾಗಿದೆ. ಹೆಂಡತಿ ಹಾಲು ತರಲು ಹೋದ ಸಮಯ ಸಾಧಿಸಿ ತನ್ನ ಮೂರು ಮಕ್ಕಳನ್ನು ಬಲಿ ಕೊಟ್ಟು ತಾನೂ ಕತ್ತು ಕೊಯ್ದು ಕಾಳಿ ಸನ್ನಿಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ.