ಫ್ರಾನ್ಸ್ ನಂತರ ಇದೀಗ ಕೆನಡಾದಲ್ಲಿ ಮುಸ್ಲಿಂ ಮಹಿಳೆಯರು ಸರ್ಕಾರಿ ಕಚೇರಿ ಕೆಲಸಗಳಲ್ಲಿ ಪರ್ದಾ (ಬುರ್ಖಾದ ಮುಖಗವಸು) ಧರಿಸುವುದಕ್ಕೆ ನಿಷೇಧ ಹೇರಲಾಗಿದೆ.
ಬುಧವಾರ ಈ ಮಸೂದೆಯ ಮಂಡನೆಯಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ಕೆಲಸದ ವೇಳೆ ಮುಸ್ಲಿಂ ಮಹಿಳೆಯರು ತಮ್ಮ ಪರ್ದಾ ಧರಿಸುವುದು ನಿಷಿದ್ಧ ಎನ್ನಲಾಗಿದೆ. ಈಜಿಪ್ಟ್ ವಲಸಿಗರೊಬ್ಬರು ತಮ್ಮ ಫ್ರೆಂಚ್ ಭಾಷಾ ತರಗತಿಯಲ್ಲಿ ಪರ್ದಾ ತೆಗೆದು ಬರುವುದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಈ ಪ್ರಕರಣದ ನಂತರ ಇದೀಗ ಕೆನಡಾದಲ್ಲಿ ಪರ್ದಾವನ್ನು ಶಾಲಾ ಕಾಲೇಜು, ಕಚೇರಿಗಳ ಕೆಲಸದ ಸಂದರ್ಭ ಧರಿಸುವಂತಿಲ್ಲ ಎಂಬ ನಿಯಮಾವಳಿ ತರಲಾಗಿದೆ.
ಕಾಲೇಜಿನಲ್ಲಿ ಫ್ರೆಂಚ್ ಕಲಿಯಲು ಬರುವ ಮುಸ್ಲಿಂ ಮಹಿಳೆಯೊಬ್ಬರಿಗೆ ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗಿಂತಲೂ ಮುಂದೆ ಕೂರುವ ಅವಕಾಶ ನೀಡಲಾಗಿತ್ತು. ಹಾಗಾಗಿ ತರಗತಿಯ ಉಳಿದೆಲ್ಲಾ 17 ಹುಡುಗರು ಮುಸ್ಲಿಂ ಮಹಿಳೆಯ ಹಿಂದೆ ಕೂರುವುದರಿಂದ ಆ ಮಹಿಳೆಯನ್ನು ಅವರಿಗೆ ನೋಡಲು ಸಾಧ್ಯವಿಲ್ಲ. ಜೊತೆಗೆ ತರಗತಿಯಲ್ಲಿ ಎಲ್ಲರನ್ನು ಉದ್ದೇಶಿಸಿ ಉಪನ್ಯಾಸ ಮಂಡಿಸುವಾಗಲೂ ಆ ಮಹಿಳೆಗೆ ಹಿಮ್ಮುಖ ಮಾಡಿ ಉಪನ್ಯಾಸ ಮಾಡಲು ಅವಕಾಶ ನೀಡಲಾಗಿತ್ತು. ಇಷ್ಟು ಅವಕಾಶ ನೀಡಿದ್ದಾಗ್ಯೂ, ಆ ಮುಸ್ಲಿ ಮಹಿಳೆ ಯು-ಟೇಬಲ್ ಸಮಾವೇಶದಲ್ಲಿ ಫ್ರೆಂಚ್ ಭಾಷೆ ಕುರಿತು ಚರ್ಚಿಸಲು ಎಲ್ಲಾ ವಿದ್ಯಾರ್ಥಿಗಳ ಜೊತೆ ಎದುರು ಬದುರಾಗಿ ಕೂರಲು ನಿರಾಕರಿಸಿದ್ದು ಇತರ ವಿದ್ಯಾರ್ಥಿಗಳನ್ನು ಕೆರಳಿಸಿತ್ತು.
ಹೀಗಾಗಿ ಕಳೆದ ಮೂರು ವಾರಗಳ ಹಿಂದೆ ಆ ಮುಸ್ಲಿ ಮಹಿಳೆ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದಳು. ಆದರೆ ಸರ್ಕಾರ ಮಾತ್ರ ಕಲಿಕೆಯ ಸಂದರ್ಭ ಪರ್ದಾ ಧರಿಸುವ ಅಗತ್ಯತೆಯನ್ನೇ ಪ್ರಶ್ನಿಸಿತ್ತು.
ಮಸೂದೆಯಲ್ಲಿ ಏನಿದೆ?: ಈ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಸೂದೆಯನ್ನು ತಂದಿದ್ದು, ಪ್ರತಿ ಮುಸ್ಲಿಂ ಮಹಿಳೆ ತನ್ನ ಮೆಡಿಕೇರ್ ಕಾರ್ಡ್‌ಗಾಗಿ ಅರ್ಜಿ ಹಾಕಲು ತನ್ನ ಗುರುತಿಗಾಗಿ ಬುರ್ಖಾದ ಮುಖಗವಸನ್ನು ಮೇಲೆತ್ತಲೇಬೇಕು. ಅಲ್ಲದೆ, ಅಟೋ ಇನ್ಶುರೆನ್ಸ್, ಮೆಡಿಕಲ್ ಸೌಲಭ್ಯಗಳು ಸೇರಿದಂತೆ ಹಲವು ವಿಚಾರಗಳಿಗಾಗಿ ತನ್ನ ಗುರುತನ್ನು ತೋರಿಸಲು ಬುರ್ಖಾದ ಮುಖಗವಸನ್ನು ಮೇಲೆತ್ತಲೇಬೇಕು. ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿ ಬುರ್ಖಾ ಮೂಲಕ ಮುಖ ಮುಚ್ಚಿಯೇ ವ್ಯವಹಾರ ನಡೆಸಲು ಬಂದರೆ ಸರ್ಕಾರಿ ಅಧಿಕಾರಿಗಳು ಸಹಿಸಲಾರರು ಎಂದು ಮಸೂದೆಯ ಮೂಲಕ ಎಚ್ಚರಿಕೆಯನ್ನೂ ನೀಡಲಾಗಿದೆ.
ಅಲ್ಲದೆ, ಮುಸ್ಲಿಂ ಸಮುದಾಯದ ಬ್ಗಗೆ ಗೌರವವಿದ್ದುಕೊಂಡೇ ಈ ಮಸೂದೆ ತರಲಾಗಿದ್ದು, ಸಮಾಜದ ಎಲ್ಲ ಸ್ಥರಗಳಲ್ಲೂ ಪುರುಷ ಹಾಗೂ ಮಹಿಳೆಯರಿಗೆ ಸಮಾನ ಗೌರವ ದಕ್ಕಬೇಕೆಂಬುದು ನಮ್ಮ ಆಶಯ ಎಂದೂ ಸರ್ಕಾರ ಹೇಳಿದೆ.
ಆದರೆ ಕೆನಡಾದ ಮುಸ್ಲಿಂ ಸಂಘಟನೆ ಮಾತ್ರ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದನ್ನು 'ನೀ ಜರ್ಕ್' (ಮೊಣಕಾಲಿಗೇ ನೀಡಿದ ಪೆಟ್ಟು) ಎಂದು ವ್ಯಾಖ್ಯಾನಿಸಿದೆ.
ಕೆನಡಾದ 34 ಮಿಲಿಯನ್ ಜನಸಂಖ್ಯೆಯ ಪೈಕಿ ಒಂದು ಮಿಲಿಯನ್ ಮಂದಿ ಮುಸ್ಲಿಂ ಸಮುದಾಯದವರಿದ್ದಾರೆ. ಇನ್ನು ಮುಂದಿನ ಎರಡು ದಶಕಗಳಲ್ಲಿ ಈ ಸಂಖ್ಯೆ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕೆನಡಾದಲ್ಲಿರುವ ಮುಸ್ಲಿಂ ಮಹಿಳೆಯರ ಪೈಕಿ ಬಹುತೇಕರು ಪರದಾ ಧರಿಸುವುದಿಲ್ಲವಾದರೂ, ಈ ಮಸೂದೆ ಮಹತ್ವದ್ದಾಗಿದ್ದು ಬಹು ಚರ್ಚೆಗೆ ಕಾರಣವಾಗಿದೆ.