ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚರ್ಚ್‌ನಲ್ಲಿ ಲೈಂಗಿಕ ದೌರ್ಜನ್ಯ: ಪೋಪ್ ಹೆಸರಿಗೂ ಕಳಂಕ (Pope Benedict | Catholic Church | Sex Abuse)
Bookmark and Share Feedback Print
 
ಕ್ಯಾಥೊಲಿಕ್ ಚರ್ಚ್ ಸಮುದಾಯದಲ್ಲಿ ಪದೇ ಪದೇ ಕೇಳಿಬರುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳು ಕ್ರೈಸ್ತರ ಗುರು ಪೋಪ್ ಬಳಿಗೆಯೇ ತಲುಪಿದ್ದು, ಅವರು ಸುಮಾರು 200 ಮಂದಿ ಕಿವುಡ ಹುಡುಗರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಮೆರಿಕನ್ ಪಾದ್ರಿಯೊಬ್ಬರನ್ನು ರಕ್ಷಿಸಿದ್ದಾರೆ ಎಂಬ ಆರೋಪಗಳು ಇದೀಗ ಹೊಸ ವಿವಾದಕ್ಕೆ ನಾಂದಿಯಾಗಿವೆ.

ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾಗಿರುವ ವರದಿಯೊಂದು, ವ್ಯಾಟಿಕನ್‌ಗೆ ತನ್ನ ಚರ್ಚುಗಳಲ್ಲಿ, ಶಿಬಿರಗಳಲ್ಲಿರುವ ಮುಗ್ಧ ಮಕ್ಕಳ ಕಾಳಜಿಗಿಂತ, ತನ್ನ ಪ್ರತಿಷ್ಠೆಯನ್ನು ರಕ್ಷಿಸಿಕೊಳ್ಳುವುದೇ ಮುಖ್ಯ ಉದ್ದೇಶವಾಗಿಬಿಟ್ಟಿದೆ ಎಂದು ತಿಳಿಸಿದ್ದು, ಚರ್ಚು ಮತ್ತು ಪೋಪ್ ಬೆನೆಡಿಕ್ಟ್ ಅವರ ಸುತ್ತಮುತ್ತ ಆವರಿಸಿಕೊಂಡಿರುವ ಕಳಂಕ ಮತ್ತು ಸಾರ್ವಜನಿಕರ ಆಕ್ರೋಶದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪೋಪ್ ಬೆನೆಡಿಕ್ಟ್ - XVI ಅವರತ್ತಲೇ ನೇರವಾಗಿ ಬೊಟ್ಟು ಮಾಡಲಾದ ವರದಿಯಲ್ಲಿ, ಕಾರ್ಡಿನಲ್ ಆಗಿದ್ದಾಗ, ಫಾದರ್ ಲಾರೆನ್ಸ್ ಮರ್ಫಿ ಎಂಬವರ ವರ್ತನೆ ಬಗ್ಗೆ ಜೋಸೆಫ್ ರಾಟ್ಜಿಂಗರ್ (ಪೋಪ್ ಆಗಿ ನೇಮಕವಾಗುವ ಮೊದಲಿನ ಹೆಸರು) ಅವರಿಗೆ ಎರಡು ಬಾರಿ ಮಾಹಿತಿ ನೀಡಲಾಗಿತ್ತು. ಫಾದರ್ ಲಾರೆನ್ಸ್ ಅವರು 1950 ಹಾಗೂ 1974ರ ನಡುವೆ ವಿಸ್ಕಾನ್ಸಿನ್‌ನಲ್ಲಿ ಕಿವುಡರಿಗಾಗಿ ಶಾಲೆಯನ್ನು ನಡೆಸುತ್ತಿದ್ದರು. ಲಾರೆನ್ಸ್ ಅವರು ಅಲ್ಲಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿತ್ತು. ಈ ಬಗ್ಗೆ ವಿಚಾರಣೆಗಾಗಿ ಕೋರಿಕೊಳ್ಳಲಾಗಿತ್ತು. ಆದರೆ ಅದನ್ನು ರಾಟ್ಜಿಂಗರ್ ನಿರಾಕರಿಸಿದರು. ಅಂದು ರಾಟ್ಜಿಂಗರ್ ಅವರಿಗೆ ಆರೋಪಿ ಫಾದರ್ ಪತ್ರ ಬರೆದು, ತನ್ನನ್ನು ಸಿಲುಕಿಸಿ ಹಾಕದಂತೆ ಕೋರಿಕೊಂಡಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಹೀಗಾಗಿ ಡಾಕ್ಟ್ರೈನ್ ಆಫ್ ದಿ ಫೈತ್ (ನಂಬಿಕೆಯ ಸಿದ್ಧಾಂತ) ಮುಖ್ಯಸ್ಥರಾಗಿದ್ದ ರಾಟ್ಜಿಂಗರ್, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಬಾಧ್ಯಸ್ಥರು ಎಂದು ಪತ್ರಿಕೆ ಹೇಳಿದೆ.

ಆರೋಪಿಗಳನ್ನು ರಕ್ಷಿಸುವ ಕುರಿತಾದ ಹೊಸ ವಾದವನ್ನು ವ್ಯಾಟಿಕನ್ ಕಟುವಾಗಿಯೇ ನಿರಾಕರಿಸಿದೆ. ಇದು ಪೋಪ್ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವೆಂದು ಅದು ದೂರಿದೆ. ವ್ಯಾಟಿಕನ್ ದೈನಿಕ 'ಲೋಸ್ಸರ್ವೆಟೋರ್ ರೊಮಾನೋ'ದ ಮುಖಪುಟದಲ್ಲಿ ಈ ಸ್ಪಷ್ಟನೆ ಪ್ರಕಟವಾಗಿದ್ದು, ಪೋಪ್ ಅವರ ಗೌರವಕ್ಕೆ ಕುತ್ತು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳತ್ತ ಕಿಡಿ ಕಾರಲಾಗಿದೆ. 'ಕ್ಯಾಥೊಲಿಕ್ ಚರ್ಚ್ ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗುವ ಏಕೈಕ ಸಂಸ್ಥೆ ಎಂಬಂತೆ ಬಿಂಬಿಸಲಾಗುತ್ತಿದ್ದು, ನಿಜಾಂಶಗಳನ್ನು ಮುಚ್ಚಿಟ್ಟು, ಅಭಿಪ್ರಾಯಗಳನ್ನು ಹೇರುವ ಆಂದೋಲನ ನಡೆಯುತ್ತಿದೆ' ಎಂದು ಪ್ರತಿಕ್ರಿಯಿಸಿದೆ.

ಮ್ಯೂನಿಚ್‌ನ ಆರ್ಚ್‌ಬಿಷಪ್ ಆಗಿದ್ದಾಗಿನ ಪ್ರಕರಣವೊಂದರಲ್ಲಿ ಪೋಪ್ ಅವರು ಈಗಾಗಲೇ ವಿವಾದಕ್ಕೆ ಸಿಲುಕಿದ್ದಾರೆ. ಆ ಅವಧಿಯಲ್ಲಿ ಅರ್ಚ್ ಬಿಷಪ್ಪರು ತಮ್ಮ ಆರ್ಚ್‌ಡಯಸೀಸ್‌ಗೆ ಶಿಶುಕಾಮಿ ಪಾದ್ರಿಯೊಬ್ಬರನ್ನು ಸೇರಿಸಿಕೊಂಡಿದ್ದರು ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಸಾಧ್ಯವಾಗುವ ಕರ್ತವ್ಯಕ್ಕೇ ನಿಯೋಜಿಸಿದ್ದರು ಎಂಬ ಆರೋಪ ಹೊತ್ತಿದ್ದು, ಅದಕ್ಕೆ ಸ್ಪಷ್ಟನೆ ನೀಡಲು ವ್ಯಾಟಿಕನ್ ತೀರಾ ತ್ರಾಸಪಟ್ಟಿತ್ತು.

ಇದೀಗ ಲೈಂಗಿಕ ದೌರ್ಜನ್ಯಕ್ಕೆ ಬಲಿಪಶುಗಳಾಗಿರುವ ಮಕ್ಕಳ ಪೋಷಕರು ಕೂಡ ಒಟ್ಟಾಗಿದ್ದು, ವಿಶೇಷವಾಗಿ ಗಂಭೀರ ಅಪರಾಧಗಳಿಗೆ ಸಂಬಂಧಿಸಿದ ಕ್ಯಾನೋನಿಕಲ್ ವಿಚಾರಣೆಗಳ ಸಂದರ್ಭ ರಹಸ್ಯ ಕಾಪಾಡುವ ಅವಶ್ಯಕತೆಯಿದೆ ಎಂದು ಪೋಪ್ ಆಗಿ ಅಧಿಕಾರ ಸ್ವೀಕರಿಸುವುದಕ್ಕೆ ಮುನ್ನ ಎಲ್ಲ ಬಿಷಪ್‌ಗಳಿಗೆ ನೀಡಿರುವ ಸಂದೇಶದಲ್ಲಿ ಬೆನೆಡಿಕ್ಟ್ ಹೇಳುವ ಮೂಲಕ, ಪ್ರಕರಣ ಮುಚ್ಚಿಹಾಕಲು ಪ್ರೇರಣೆ ನೀಡಿದ್ದಾರೆ ಎಂದೂ ಆರೋಪಿಸಿವೆ.

ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಫಾದರ್ ಲಾರೆನ್ಸ್ ಮರ್ಫಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರಾದರೂ, ಅವರನ್ನು ಪೌರ ಅಧಿಕಾರಿಗಳ ಕೈಗೆ ಒಪ್ಪಿಸಲಿಲ್ಲ. ಅವರ ಮೇಲೆ ಕ್ರಮ ಕೈಗೊಳ್ಳುವ ಬದಲಾಗಿ, ಬೋಧಕನ ಸ್ಥಾನದಿಂದ ತೆಗೆದು, ಬೇರೊಂದು ಡಯಸೀಸ್‌ಗೆ ವರ್ಗಾಯಿಸಲಾಯಿತು. ಅಲ್ಲಿ ಅವರು 20ಕ್ಕೂ ಹೆಚ್ಚು ವರ್ಷಗಳ ಕಾಲ ಪ್ಯಾರಿಶ್‌ಗಳು, ಶಾಲೆಗಳು ಮುಂತಾದವುಗಳಲ್ಲಿ ಕೆಲಸ ಮಾಡಿದ್ದರು.

ಈ ಪತ್ರಿಕೆ ಹೇಳುವಂತೆ, 1996ರಲ್ಲಿ ಮಿಲ್ವಾಕೀಯ ಆರ್ಚ್‌ಬಿಷಪ್ ಆಗಿದ್ದ ರೆಂಬರ್ಟ್ ವೀಕ್‌ಲ್ಯಾಂಡ್ ಅವರು, ಭಾವೀ ಪೋಪ್‌ಗೆ ಈ ಕುರಿತು ಎರಡು ಬಾರಿ ಪತ್ರ ಬರೆದಿದ್ದರಾದರೂ, ಯಾವುದೇ ಉತ್ತರ ಲಭಿಸಿರಲಿಲ್ಲ. ಈ ಬಗ್ಗೆ ಪತ್ರಿಕೆಯ ಬಳಿ ಸಾಕ್ಷ್ಯಾಧಾರ ಪತ್ರಗಳೂ ಇವೆ. ಫಾದರ್ ಲಾರೆನ್ಸ್ ಅವರು ರಾಟ್ಜಿಂಗರ್‌ಗೆ ಪ್ರಕರಣ ಕೈಬಿಡಲು ಮನವಿ ಪತ್ರ ಬರೆದ ಬಳಿಕ, ಈ ಕುರಿತ ವಿಚಾರಣೆಯನ್ನು ಸ್ಥಗಿತಗೊಳಿಸಲಾಯಿತು.

ಈಗ ವ್ಯಾಟಿಕನ್ ಹೇಳಿಕೆಯು ಇದು 'ದುರಂತಮಯ' ಸಂಗತಿ ಎಂದು ಹೇಳಿದ್ದು, 20 ವರ್ಷಗಳ ಹಿಂದಿನವರೆಗೂ ಸ್ಥಾಯಿ ಸಮಿತಿಗೆ ಮಾಹಿತಿ ನೀಡಲಾಗಿರಲಿಲ್ಲ, ಸಿವಿಲ್ ಅಧಿಕಾರಿಗಳು ಆರೋಪಗಳ ಬಗ್ಗೆ ತನಿಖೆ ನಡೆಸಿದ್ದಾರೆ ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದೆಯಾದರೂ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣವನ್ನು ಕಾನೂನು ಅಧಿಕಾರಿಗಳಿಗೆ ವರದಿ ಮಾಡದಂತೆ ನಮ್ಮ ಕಾನೂನು ತಡೆಯುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಫಾದರ್ ಲಾರೆನ್ಸ್ ಮರ್ಫಿ ಅವರು ವಯೋವೃದ್ಧರಾಗಿದ್ದು, ಅನಾರೋಗ್ಯದಿಂದಿರುವುದರಿಂದ, ಏಕಾಂತದಲ್ಲಿ ವಾಸಿಸುತ್ತಿದ್ದಾರೆ ಮತ್ತು 20 ವರ್ಷಗಳಿಂದ ಯಾವುದೇ ದೌರ್ಜನ್ ಆರೋಪಗಳು ಕೇಳಿಬಂದಿಲ್ಲ. ಆದುದರಿಂದ ಫಾದರ್ ಮರ್ಫಿಯವರ ಬಹಿರಂಗ ಕಾಣಿಸಿಕೊಳ್ಳುವಿಕೆಯನ್ನು ನಿರ್ಬಂಧಿಸುವಂತೆ, ಮತ್ತು ಫಾದರ್ ಮರ್ಫಿ ಅವರು ತಮ್ಮ ಕತ್ಯಗಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಸುಮಾರು ನಾಲ್ಕು ತಿಂಗಳ ಬಳಿಕ ಫಾದರ್ ಮರ್ಫಿ ಅವರು ನಿಧನರಾಗಿದ್ದರು.

ಈ ಲೈಂಗಿಕ ದೌರ್ಜನ್ಯ ನಡೆದಿದ್ದು ಲೇಕ್ ಮಿಚಿಗನ್‌ನ ಸೈಂಟ್ ಫ್ರಾನ್ಸಿಸ್‌ನಲ್ಲಿರುವ ಕಿವುಡ ಬಾಲಕರ ವಸತಿ ಶಾಲೆಯಲ್ಲಿ. ಕಿವುಡ ಬಾಲಕರ ವಸತಿ ಶಾಲೆಗೇ ಸೀಮಿತವಾಗಿರಲಿಲ್ಲ ಈ ಪಾದ್ರಿಯ ಲೈಂಗಿಕ ಕಿರುಕುಳ. ಇತರ ಹಲವರು ಕೂಡ ಮರ್ಫಿಯ ಕೃತ್ಯಗಳ ಬಗ್ಗೆ ಹೇಳಿಕೆ ನೀಡಲು ಮುಂದೆ ಬಂದಿದ್ದಾರೆ. ಅವರನ್ನು ಅಲ್ಲಿಂದ ವರ್ಗಾಯಿಸಲಾಗಿದ್ದರೂ, ಅವರು ಬಾಲಕರ ಮೇಲಿನ ಲೈಂಗಿಕ ಕಿರುಕುಳವನ್ನು ಅಲ್ಲಿಯೂ ಮುಂದುವರಿಸಿದ್ದರು ಎಂದಿದೆ ಪತ್ರಿಕೆ.

ಗುರುವಾರ, ಮರ್ಫಿಯ ಲೈಂಗಿಕ ಕಿರುಕುಳಕ್ಕೆ ತುತ್ತಾದವರ ತಂಡವೊಂದು, ವ್ಯಾಟಿಕನ್ ಹೊರಗೆ ಸುದ್ದಿಗಾರರಿಗೆ ದಾಖಲೆ ಪತ್ರಗಳನ್ನು ಒದಗಿಸಿತ್ತು. ಈ ದಾಖಲೆಗಳ ಪ್ರಕಾರ, ವ್ಯಾಟಿಕನ್ ಈ ಪ್ರಕರಣವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ