ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಕ್ಯೂ ಖಾನ್ ಮುಕ್ತ, ಸಂದರ್ಶನ ಕೊಡಬಾರ್ದು: ಪಾಕ್ ಕೋರ್ಟ್ (AQ Khan | Pak court | Lahore | Pakistan | Lahore High Court)
Bookmark and Share Feedback Print
 
ದೇಶದ ಪರಮಾಣು ಕಾರ್ಯಕ್ರಮ ಹಾಗೂ ಸೂಕ್ಷ್ಮ ಮಾಹಿತಿಗಳು ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡುವುದಾಗಲಿ, ಸಂದರ್ಶನ ನೀಡುವಂತಿಲ್ಲ ಎಂದು ಪರಮಾಣು ವಿಜ್ಞಾನಿ ಎಕ್ಯೂ.ಖಾನ್‌ಗೆ ಪಾಕಿಸ್ತಾನದ ಕೋರ್ಟ್ ಸೋಮವಾರ ತಾಕೀತು ಮಾಡಿದೆ.

ಮುಕ್ತ ಓಡಾಟದ ಮೇಲೆ ಹೇರಿದ್ದ ನಿರ್ಬಂಧವನ್ನು ರದ್ದುಗೊಳಿಸುವಂತೆ ಕೋರಿ 74ರ ಹರೆಯದ ಎಕ್ಯೂ.ಖಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಲಾಹೋರ್ ಹೈಕೋರ್ಟ್, ಈ ಬಗ್ಗೆ ತೀರ್ಪು ನೀಡುತ್ತಾ ಖಾನ್ ಅವರು ಯಾವುದೇ ಕಾರಣಕ್ಕೂ ನ್ಯೂಕ್ಲಿಯರ್ ಶಸ್ತ್ರಾಸ್ತ್ರ ತಂತ್ರಜ್ಞಾನದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಲು ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಆದರೆ ಖಾನ್ ಅವರ ಮುಕ್ತ ಓಡಾಟದ ಮೇಲೆ ಹೇರಿದ್ದ ನಿರ್ಬಂಧವನ್ನು ರದ್ದುಗೊಳಿಸಿದ ಕೋರ್ಟ್, ಪಾಕ್ ಸರ್ಕಾರ ಖಾನ್ ಅವರ ಎಲ್ಲಿಯೇ ಹೋಗಲಿ ಅಲ್ಲೆಲ್ಲಾ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಸೂಚನೆ ನೀಡಿದೆ.

ಆ ನಿಟ್ಟಿನಲ್ಲಿ ಎಕ್ಯೂ ಖಾನ್ ಇದೀಗ ಮುಕ್ತ ವ್ಯಕ್ತಿಯಾಗಿದ್ದಾರೆ. ಆದರೆ ಅವರಿಗೆ ಸರ್ಕಾರ ಸೂಕ್ತವಾದ ಭದ್ರತೆ ನೀಡಬೇಕು ಎಂದು ಕೋರ್ಟ್ ಆದೇಶ ನೀಡಿದೆ ಎಂದು ಖಾನ್ ಪರ ವಕೀಲ ಅಲಿ ಜಾಫರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಸರ್ಕಾರ ಮತ್ತು ಖಾನ್ ನಡುವೆ ಕೆಲವೊಂದು ಜಟಾಪಟಿ ಇದ್ದಿದ್ದರಿಂದ ಈ ಹಿಂದೆ ನ್ಯಾಯಮೂರ್ತಿ ಲಿಯಾಜ್ ಅಹ್ಮದ್ ಚೌಧರಿ ಪ್ರಕರಣದ ತೀರ್ಪನ್ನು ಮೂರು ಬಾರಿ ಮುಂದೂಡಿ, ಖಾನ್ ಮತ್ತು ಸರ್ಕಾರ ನ್ಯಾಯಾಲಯದ ಹೊರಗೆ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ನಿರ್ದೇಶನ ನೀಡಿತ್ತು.

ಆ ಕಾರಣದಿಂದಾಗಿ ಸರ್ಕಾರ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಮನವಿಯನ್ನು ಕೋರ್ಟ್‌ಗೆ ಸಲ್ಲಿಸಿತ್ತು. ಒಂದು ಖಾನ್ ಅವರ ಮುಕ್ತ ಓಡಾಟದ ಮೇಲಿನ ನಿಷೇಧ ರದ್ದತಿಗೆ ಸಮ್ಮತಿ ನೀಡಿ, ಖಾನ್ ಅವರು ಯಾವುದೇ ಪತ್ರಿಕೆ, ದೃಶ್ಯ ಮಾಧ್ಯಮಗಳಿಗೆ ಸಂದರ್ಶನ ಕೊಡುವ ಬಗ್ಗೆ ನಿರ್ಬಂಧ ಹೇರಬೇಕೆಂದು ಕೋರಿತ್ತು. ಮತ್ತೊಂದು ದೇಶದ ನ್ಯೂಕ್ಲಿಯರ್ ರಹಸ್ಯವನ್ನು ಇರಾನ್ ಮತ್ತು ಇರಾಕ್‌ಗೆ ಹಸ್ತಾಂತರಿಸಿರುವುದಾಗಿ ವಾಷಿಂಗ್ಟನ್ ಪೋಸ್ಟ್‌ಗೆ ಕೊಟ್ಟಿರುವ ಸಂದರ್ಶನದಲ್ಲಿ ಖಾನ್ ತಿಳಿಸಿದ್ದು, ಈ ಬಗ್ಗೆ ತನಿಖೆ ನಡೆಸಲು ಅನುಮತಿ ನೀಡಬೇಕೆಂದು ಮನವಿ ಮಾಡಿತ್ತು.

ಅದಕ್ಕೆ ಪೂರಕ ಎಂಬಂತೆ ಖಾನ್ ಕೂಡ ನ್ಯಾಯಾಲಯಕ್ಕೆ ಅಫಿದವಿಟ್ ಸಲ್ಲಿಸಿ, ತಾನು ನ್ಯೂಕ್ಲಿಯರ್ ವಿಷಯದ ಕುರಿತಂತೆ ವಾಷಿಂಗ್ಟನ್ ಪೋಸ್ಟ್‌ಗಾಗಲಿ ಯಾವುದೇ ಪತ್ರಿಕೆಗಳಿಗೂ ಸಂದರ್ಶನ ಕೊಟ್ಟಿಲ್ಲ ಎಂದು ಸಮಜಾಯಿಷಿ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ