ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೇನೆಯಿಂದ ವಾಯುವ್ಯ ಪಾಕಿಸ್ತಾನದಲ್ಲಿ 21 ಉಗ್ರರ ಹತ್ಯೆ
(Orakzai region | Taliban militants | Pakistan | northwestern tribal region)
ವಾಯುವ್ಯ ಬುಡಕಟ್ಟು ಪ್ರಾಂತ್ಯ ಒರಾಕ್ಜೈ ಎಂಬಲ್ಲಿನ ಮಿಲಿಟರಿ ತಪಾಸಣಾ ಕೇಂದ್ರದ ಮೇಲೆ ನಡೆಸಲು ಯತ್ನಿಸಿದ ಭಯೋತ್ಪಾದನಾ ದಾಳಿಯನ್ನು ಹಿಮ್ಮೆಟ್ಟಿಸಲಾಗಿದ್ದು, ಈ ಸಂದರ್ಭದಲ್ಲಿ ಕನಿಷ್ಠ 21 ಉಗ್ರರನ್ನು ಕೊಂದು ಹಾಕಲಾಗಿದೆ ಎಂದು ಪಾಕಿಸ್ತಾನ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ಕೇಂದ್ರವನ್ನು ಪಡೆಗಳು ಮತ್ತು ಫಿರಂಗಿಗಳು ಯಶಸ್ವಿಯಾಗಿ ರಕ್ಷಿಸಿವೆ ಎಂದು ಒರಾಕ್ಜೈ ಪ್ರಾಂತ್ಯದ ಸರಕಾರಿ ಹಿರಿಯ ಅಧಿಕಾರಿ ಸಮೀಯುಲ್ಲಾಹ್ ಖಾನ್ ತಿಳಿಸಿದ್ದಾರೆ. ಈ ಪ್ರಾಂತ್ಯವು ಪಾಕಿಸ್ತಾನಿ ತಾಲಿಬಾನ್ ಪ್ರಬಲ ಹಿಡಿತದಲ್ಲಿದ್ದು, ಆಗಾಗ ದಾಳಿಗಳು ನಡೆಯುವುದು ಸಾಮಾನ್ಯ.
ದಕ್ಷಿಣ ವಜಿರಿಸ್ತಾನದ ಸಮೀಪವಿದ್ದ ಭಯೋತ್ಪಾದಕ ಸಂಘಟನೆಯ ಪ್ರಮುಖ ನೆಲೆಯ ಮೇಲೆ ಸೇನಾ ಕಾರ್ಯಾಚರಣೆ ಬಳಿಕ ಪರಾರಿಯಾಗಿದ್ದ ಭಯೋತ್ಪಾದಕರ ವಿರುದ್ಧ ಒರಾಕ್ಜೈ ಪ್ರಾಂತ್ಯದಲ್ಲಿ ಮಾರ್ಚ್ ಮಧ್ಯಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಮತ್ತೊಂದು ಕಾರ್ಯಾಚರಣೆ ಆರಂಭಿಸಿದ್ದವು.
ಈ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದು ಹಾಕಲಾಗಿದೆ ಎಂದು ಖಾನ್ ತಿಳಿಸಿದ್ದಾರೆ.
ಕಾರ್ಯಾಚರಣೆ ಹಿನ್ನೆಲೆಯಲ್ಲಿ ಇಲ್ಲಿನ ಸಾವಿರಾರು ನಾಗರಿಕರನ್ನು ಪಕ್ಕದ ಕೋಹಟ್ ಜಿಲ್ಲೆಯ ಸರಕಾರಿ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಹೋರಾಟದ ಸಂದರ್ಭದಲ್ಲಿ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಕೆಲವರನ್ನು ಪಕ್ಕದ ಪ್ರಾಂತ್ಯಗಳ ತಮ್ಮ ಸಂಬಂಧಿಕರ ಮನೆಗಳಿಗೂ ಕಳುಹಿಸಲಾಗಿದೆ ಎಂದು ಸರಕಾರ ತಿಳಿಸಿದೆ.