ಪಾಕಿಸ್ತಾನ: ಹಲವೆಡೆ ಉಗ್ರರ ಸರಣಿ ಬಾಂಬ್ ಸ್ಫೋಟಕ್ಕೆ 38 ಬಲಿ
ಡೀರ್, ಸೋಮವಾರ, 5 ಏಪ್ರಿಲ್ 2010( 16:22 IST )
ಪಾಕಿಸ್ತಾನದ ವಾಯುವ್ಯ ಪ್ರದೇಶದಲ್ಲಿ ಶಂಕಿತ ಇಸ್ಲಾಮಿಸ್ಟ್ ಉಗ್ರಗಾಮಿಗಳು ಪೇಶಾವರದಲ್ಲಿನ ಅಮೆರಿಕದ ರಾಯಭಾರಿ ಕಚೇರಿಯನ್ನು ಗುರಿಯಾಗಿರಿಸಿಕೊಂಡು ಸರಣಿ ಬಾಂಬ್ ಸ್ಫೋಟ ನಡೆಸಿದ್ದಾರೆ. ಹಾಗೂ ರಾಜಕೀಯ ಪಕ್ಷವೊಂದರ ಸಭೆಯೊಂದರ ಮೇಲೆ ದಾಳಿ ನಡೆಸಿದ ಪರಿಣಾಮ ಒಟ್ಟು 38ಮಂದಿ ಬಲಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೇಶಾವರದ ಅತಿ ಸೂಕ್ಷ್ಮಪ್ರದೇಶದಲ್ಲಿ ಅಮೆರಿಕದ ರಾಯಭಾರಿ ಕಚೇರಿಯನ್ನು ಗುರಿಯಾಗಿರಿಸಿಕೊಂಡು ಮೂರು ಪ್ರಬಲ ಸ್ಫೋಟಗಳನ್ನು ನಡೆಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಲ್ಲದೇ ಅಮೆರಿಕದ ರಾಯಭಾರ ಕಚೇರಿ ಮೇಲಿನ ದಾಳಿಯನ್ನು ಅಮೆರಿಕದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇದರಲ್ಲಿ ಸಾವನ್ನಪ್ಪಿದವರ, ಗಾಯಗೊಂಡವರ ಬಗ್ಗೆ ಯಾವುದೇ ವಿವರ ಲಭಿಸಿಲ್ಲ.
ಅಲ್ಲದೇ ಪಾಕಿಸ್ತಾನದ ವಾಯುವ್ಯ ಜಿಲ್ಲೆಯಲ್ಲಿ ಪಶ್ತುನ್ ಜನಾಂಗದ ನ್ಯಾಷನಲಿಸ್ಟ್ ರಾಜಕೀಯ ಪಕ್ಷದ ಸಭೆಯಲ್ಲಿ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನೇ ಸ್ಫೋಟಿಸಿಕೊಂಡ ಪರಿಣಾಮ 38 ಮಂದಿ ಸಾವನ್ನಪ್ಪಿದ್ದು, ನೂರು ಜನರು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಪುಶ್ತುನ್‌ನ ಅವಾಮಿ ನ್ಯಾಷನಲ್ ಪಕ್ಷದ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬರ್‌ನೊಬ್ಬ ಒಳನುಗ್ಗಲು ಯತ್ನಿಸಿದ್ದು, ಆ ಸಂದರ್ಭದಲ್ಲಿ ಭದ್ರತಾ ಪಡೆ ಆತನನ್ನು ತಡೆದಾಗ, ಅಲ್ಲಿಯೇ ತನ್ನನ್ನು ತಾನೇ ಸ್ಫೋಟಿಸಿಕೊಂಡ ಕಾರಣ ಈ ಘಟನೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿ ಸಾರ್ಜಾಮಿನ್ ಖಾನ್ ತಿಳಿಸಿದ್ದಾರೆ.
ನಾರ್ತ್ ವೆಸ್ಟ್ ಫ್ರಂಟಿಯಲ್ ಪ್ರೊವಿನ್ಸ್‌ನಲ್ಲಿ ಎಎನ್‌ಪಿ ನೇತೃತ್ವದ ಮೈತ್ರಿಕೂಟದ ಸರ್ಕಾರವಿದೆ. ಆಡಳಿತಾರೂಢ ಸರ್ಕಾರವನ್ನೇ ಗುರಿಯಾಗಿರಿಸಿಕೊಂಡು ಈ ಸ್ಫೋಟ ನಡೆಸಲಾಗಿದೆ ಎಂದು ಎಎನ್‌ಪಿ ವಕ್ತಾರ ಆರೋಪಿಸಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಪೇಶಾವರದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾರ್ತ್ ವೆಸ್ಟ್ ಫ್ರಂಟಿಯರ್ ಪ್ರೊವಿನ್ಸ್ ಅನ್ನು ಖೈಬೆರ್ ಪಾಖ್ತೂನ್‌ಕಾವ್ ಎಂದು ಹೆಸರನ್ನು ಬದಲಾಯಿಸಿ ನಿರ್ಧಾರ ಕೈಗೊಂಡಿರುವುದರ ಬಗ್ಗೆ ಪಕ್ಷ ಆಯೋಜಿಸಿದ್ದ ಸಭೆಯನ್ನು ಗುರಿಯಾಗಿರಿಸಿಕೊಂಡು ಈ ಸ್ಫೋಟ ನಡೆಸಲಾಗಿತ್ತು.