ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮಾತ್ ಇ ಇಸ್ಲಾಮಿಯ ವರಿಷ್ಠ ಮಾತಿಉರ್ ರಹಮಾನ್ ನಿಜಾಮಿ ಸೇರಿದಂತೆ ಐದು ಮಂದಿಯ ಜಾಮೀನು ಅರ್ಜಿಯನ್ನು ಢಾಕಾ ಹೈಕೋರ್ಟ್ ವಜಾಗೊಳಿಸಿ, ಕೋರ್ಟ್‌ನಲ್ಲಿ ವಿಚಾರಣೆ ಆಗುವ 9ವಾರಗಳೊಳಗೆ ಶರಣಾಗುವಂತೆಯೂ ಸೂಚನೆ ನೀಡಿದೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ಜಮಾತ್ ಇಸ್ಲಾಮಿಯ ವರಿಷ್ಠ ನಿಜಾಮಿಗೆ ಹೋಲಿಸಿಕೊಂಡಿದ್ದರ ವಿರುದ್ಧ ಐದು ಮಂದಿ ಇದೀಗ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಪ್ರಕರಣದಲ್ಲಿ ನಿಜಾಮಿ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಲಿ ಆಶಾನ್ ಮೊಹಮ್ಮದ್ ಮೊಜಾಹೀದ್ ಸೇರಿದಂತೆ ಐದು ಮಂದಿ ವಿರುದ್ಧ ಜೆಲ್ ಮುಖಂಡರು ಢಾಕಾ ಕೋರ್ಟ್‌ನಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ನಿಜಾಮಿಯನ್ನು ಪ್ರವಾದಿ ಮೊಹಮ್ಮದ್ ಪೈಗಂಬರ್‌ಗೆ ಹೋಲಿಸುವ ಮೂಲಕ ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಾಗಿ ಜೆಲ್ ಮುಖ್ಯಸ್ಥ ರಾಫಿಕುಲ್ ಇಸ್ಲಾಮ್ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ತಮಗೆ ಜಾಮೀನು ನೀಡಬೇಕೆಂದು ಕೋರಿ ಢಾಕಾ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ಮೇ 25ರೊಳಗೆ ಶರಣಾಗಿ, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.