ಅಫ್ಘಾನ್ ಸರ್ಕಾರದ ಪುನಾರಚನೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿದೇಶದ ಒತ್ತಡ ಹೆಚ್ಚಿದರೆ, ತಾವು ತಾಲಿಬಾನ್ ಉಗ್ರರ ಜೊತೆಗೆ ಕೈ ಜೋಡಿಸುವುದಾಗಿ ಅಫ್ಘಾನಿಸ್ತಾನ್ ಅಧ್ಯಕ್ಷ ಹಮೀದ್ ಕರ್ಜಾಯ್ ಗಂಭೀರವಾಗಿ ಎಚ್ಚರಿಕೆ ನೀಡಿರುವುದು ಮತ್ತೊಮ್ಮೆ ವಿವಾದಕ್ಕೆ ಈಡು ಮಾಡಿದೆ.
ಶನಿವಾರ ಆಯ್ದ ಕೆಲವು ಸಚಿವರೊಡನೆ ತುಂಬಾ ರಹಸ್ಯವಾಗಿ ನಡೆಸಿದ ಮಾತುಕತೆ ಸಂದರ್ಭದಲ್ಲಿ ಕರ್ಜಾಯ್ ಈ ಎಚ್ಚರಿಕೆಯನ್ನು ನೀಡಿದ್ದಾರೆನ್ನಲಾಗಿದೆ. ಕಳೆದ ವರ್ಷದ ಚುನಾವಣೆಯಲ್ಲಿ ಅಕ್ರಮ ನಡೆಸುವಲ್ಲಿ ವಿದೇಶಿ ಶಕ್ತಿಗಳ ಕೈವಾಡ ಇದೆ ಎಂಬ ಕರ್ಜಾಯ್ ಆರೋಪಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು.
ಆದರೆ ಕರ್ಜಾಯ್ ಈ ರೀತಿ ಹೇಳಿಕೆ ನೀಡಿದ್ದಾರೆಂಬುದನ್ನು ಸಚಿವರು ಸಾರಸಗಟಾಗಿ ತಳ್ಳಿಹಾಕಿದ್ದಾರೆ. ಒಂದು ವೇಳೆ ಅಮೆರಿಕದ ಒತ್ತಡ ಹೆಚ್ಚಿದಲ್ಲಿ ತಾನು ತಾಲಿಬಾನ್ ಜೊತೆ ಕೈಜೋಡಿಸುವುದಾಗಿ ಹೇಳಿದ್ದಾರೆಂದು ನಂಗಾರ್‌ಹಾರ್ ಪ್ರಾಂತ್ಯದ ಫಾರೂಕ್ ಮಾರೆನೈ ತಿಳಿಸಿದ್ದಾರೆ.
ದೇಶದ ಚುನಾವಣಾ ಸಂಸ್ಥೆ ಹಾಗೂ ಅಧ್ಯಕ್ಷರ ಅಧಿಕಾರವನ್ನು ಮತ್ತಷ್ಟು ಬಲಪಡಿಸುವ ಕಾನೂನು ತಿದ್ದುಪಡಿಗೆ ಸಂಸತ್‌ನಲ್ಲಿ ಕಳೆದ ವಾರ ಯಾಕೆ ಕೆಲವು ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ ಕಾರಣದಿಂದಾಗಿಯೇ ಕರ್ಜಾಯ್ ಈಗಾಗಲೇ ಎರಡು ಬಾರಿ ತಾಲಿಬಾನ್ ಜೊತೆ ಕೈಜೋಡಿಸುವ ಕುರಿತು ಘೋಷಿಸಿದ್ದರು.