ಅಕ್ರಮವಾಗಿ ಮಾದಕ ವಸ್ತುಗಳ ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ದೋಷಿಯಾಗಿ, ಶಿಕ್ಷೆಗೊಳಗಾಗಿದ್ದ ಜಪಾನಿನ ವ್ಯಕ್ತಿಯೊಬ್ಬನನ್ನು ಚೀನಾ ಮಂಗಳವಾರ ಗಲ್ಲಿಗೇರಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
1972ರ ನಂತರ ಜಪಾನ್ ಜೊತೆ ಚೀನಾ ರಾಜತಾಂತ್ರಿಕ ಮಟ್ಟದಲ್ಲಿ ಒಪ್ಪಂದ ಮಾಡಿಕೊಂಡ ನಂತರ ಇದೇ ಮೊದಲ ಬಾರಿಗೆ ಜಪಾನ್ ಪ್ರಜೆಯೊಬ್ಬನನ್ನು ಚೀನಾ ಗಲ್ಲಿಗೇರಿಸಿದಂತಾಗಿದೆ.
ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ಚೀನಾದ ಸುಪ್ರೀಂಕೋರ್ಟ್ ಜಪಾನಿನ ಮಿಟ್ಸುನೋಬೊ ಅಕಾನೋ (65)ಗೆ ಮರಣದಂಡನೆ ಶಿಕ್ಷೆ ಘೋಷಿಸಿತ್ತು. ಆ ನಿಟ್ಟಿನಲ್ಲಿ ಮಂಗಳವಾರ ಈಶಾನ್ಯ ಪ್ರಾಂತ್ಯದ ಲಿಯೋನಿಂಗ್ ಪ್ರದೇಶದಲ್ಲಿ ಗಲ್ಲಿಗೇರಿಸಲಾಯಿತು ಎಂದು ಕ್ಸಿನ್‌ಹುವಾ ವರದಿ ತಿಳಿಸಿದೆ.
2006ರ ಸೆಪ್ಟೆಂಬರ್ ತಿಂಗಳಿನಲ್ಲಿ ಸುಮಾರು 2.5ಕಿಲೋ ನಾರ್ಕೋಟಿಕ್ಟ್ಸ್ ಅನ್ನು ಚೀನಾದಿಂದ ಜಪಾನಿಗೆ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿಯೇ ಈಶಾನ್ಯ ಪ್ರಾಂತ್ಯದ ಡಾಲಿಯನ್ ವಿಮಾನ ನಿಲ್ದಾಣದಲ್ಲಿ ಅಕಾನೋನನ್ನು ಬಂಧಿಸಿದ್ದರು.
ಮಾದಕ ವಸ್ತು ಸಾಗಾಟ ಆರೋಪದಲ್ಲಿ ಕೆಳ ಕೋರ್ಟ್ 2008ರಲ್ಲಿ ಅಕಾನೋಗೆ ಮರಣ ದಂಡನೆ ಶಿಕ್ಷಿ ವಿಧಿಸಿತ್ತು. ನಂತರ ಈ ತೀರ್ಪನ್ನು ಚೀನಾ ಸುಪ್ರೀಂಕೋರ್ಟ್ ಎತ್ತಿಹಿಡಿಯುವ ಮೂಲಕ ಶಿಕ್ಷೆಯನ್ನು ಎತ್ತಿಹಿಡಿದಿರುವುದಾಗಿ ವರದಿ ಹೇಳಿದೆ.