ಸಾರಿಗೆ, ಆರ್ಥಿಕ ವ್ಯವಸ್ಥೆ ಮತ್ತು ರಾಜಕೀಯ ಮೂಲಗಳಿಗೆ ಲಷ್ಕರ್ ಇ ತೋಯ್ಬಾ ಮಹತ್ವದ ಬೆದರಿಕೆಯಾಗಿದೆ ಎಂದು ಅಮೆರಿಕಾ ರಕ್ಷಣಾ ಸಚಿವಾಲಯದ ತಜ್ಞರು ಹೇಳಿದ್ದು, ದಾವೂದ್ ಇಬ್ರಾಹಿಂನ ಕರಾಚಿ ಮೂಲದ 'ಡಿ-ಕಂಪನಿ' ಮತ್ತು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ನೀಡುವ ಆರ್ಥಿಕ ಸಹಕಾರವನ್ನು ಭಯೋತ್ಪಾದನಾ ಸಂಘಟನೆ ಈಗಲೂ ಪಡೆದುಕೊಳ್ಳುತ್ತಿದೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದೆ.
ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಜತೆ ನಿಕಟ ಸಂಬಂಧ ಹೊಂದಿರುವ ಲಷ್ಕರ್ ಇ ತೋಯ್ಬಾ ದಕ್ಷಿಣ ಏಷಿಯಾ ಕೇಂದ್ರಿತವಾಗಿರುವ ತನ್ನ ಕುಕೃತ್ಯಗಳನ್ನು ಎಗ್ಗಿಲ್ಲದೆ ಮುಂದುವರಿಸಲಿದೆ. ಅತ್ತ ಅದಕ್ಕೆ ಪಾಕಿಸ್ತಾನದ ಭದ್ರತಾ ವಲಯ ಮತ್ತು ಬೇಹುಗಾರಿಕಾ ಕ್ಷೇತ್ರದಿಂದ ಹಣಕಾಸಿನ ಹರಿವು ಕೂಡ ಮುಂದುವರಿಯುತ್ತದೆ ಎಂದು ಅಮೆರಿಕಾ ಸೇನಾ ಯುದ್ಧ ಕಾಲೇಜು ತಾಂತ್ರಿಕ ಅಧ್ಯಯನ ಕೇಂದ್ರ ತಿಳಿಸಿದೆ.
ಇಂತಹ ಸಹಕಾರದಿಂದಾಗಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಗಳಂತಹ ಮತ್ತಷ್ಟು ದಾಳಿಗಳನ್ನು ಭಾರತದಲ್ಲಿ ಪಾಕಿಸ್ತಾನದಿಂದ ನಡೆಸಲು ಲಷ್ಕರ್ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲು ಅನುವು ಮಾಡಿಕೊಡುತ್ತದೆ. ಜತೆಗೆ ಇಂಡಿಯನ್ ಮುಜಾಹಿದೀನ್‌ನಂತಹ ಸ್ವದೇಶಿ ತಂಟೆಕೋರರಿಗೂ ಸಹಕಾರ ನೀಡುತ್ತಾ ಬರಲಿದೆ ಎಂದು ಅಮೆರಿಕಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಿಯಾನ್ ಕ್ಲಾರ್ಕೆಯವರು ಬರೆದಿರುವ 'ಲಷ್ಕರ್ ಇ ತೋಯ್ಬಾ: ಪರವಾದಿಗಳ ಕುತರ್ಕ ಮತ್ತು ಭಾರತದಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯ ಭವಿಷ್ಯ' ಎಂಬ 117 ಪುಟಗಳ ವರದಿಯಲ್ಲಿ ಈ ಭಯೋತ್ಪಾದಕ ಸಂಘಟನೆಯ ಬಗ್ಗೆ ವಿವರವಾದ ವಿಶ್ಲೇಷಣೆ ನಡೆಸಲಾಗಿದೆ.
ಅದೇ ಹೊತ್ತಿಗೆ ಲಷ್ಕರ್ ತನ್ನ ಕಾರ್ಯಚಟುವಟಿಕೆಗಳನ್ನು ಮೇಲ್ದರ್ಜೆಗೇರಿಸಿರುವ ಅಪಾಯಕಾರಿ ಬೆಳವಣಿಗೆಯನ್ನು ಕೂಡ ವರದಿ ವಿವರಿಸಿದೆ. ಭಾರತದಾದ್ಯಂತ ಕಾರ್ಯ ನಿರ್ವಹಿಸುವ ಮೂಲಕ ಸಾರಿಗೆ, ಆರ್ಥಿಕ ಮೂಲವ್ಯವಸ್ಥೆ ಮತ್ತು ರಾಜಕೀಯ ಕ್ಷೇತ್ರಗಳ ಮೇಲೆ ನಿರಂತರ ದಾಳಿಗಳನ್ನು ನಡೆಸುವ ಮೂಲಕ ಭಾರತೀಯ ಭದ್ರತಾ ಪಡೆಗಳಿಗೆ ಸವಾಲಾಗುವ ಗುರಿಯನ್ನು ಅದು ಇಟ್ಟುಕೊಂಡಿದೆ ಎಂದೂ ಹೇಳಲಾಗಿದೆ.
ಸಮಸ್ಯೆಗಳಿಂದ ಬಳಲುತ್ತಿರುವ ಭಾರತದ ಈಶಾನ್ಯ ರಾಜ್ಯಗಳಿಂದ ತನ್ನ ಸಂಘಟನೆಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುವ ಮತ್ತು ಸಾಗರ ಮಾರ್ಗದ ಮೂಲಕ ಭಯೋತ್ಪಾದಕರನ್ನು ಒಳ ನುಸುಳುವಂತೆ ಮಾಡುವ ಮೂಲಕ ಭಾರತದ ಸಮಗ್ರತೆಗೆ ಗಂಭೀರವಾಗಿ ಧಕ್ಕೆ ತರುವ ಉದ್ದೇಶ ಸಂಘಟನೆಯದ್ದು ಎಂದು ವರದಿ ಹೇಳಿದೆ.