ಬಾಂಗ್ಲಾ ವಾರ್ ಕ್ರೈಮ್ ವಿಚಾರಣೆಯಲ್ಲಿ ಮೂಗು ತೂರಿಸಲ್ಲ: ಪಾಕ್
ಢಾಕಾ, ಮಂಗಳವಾರ, 6 ಏಪ್ರಿಲ್ 2010( 20:13 IST )
1971ರಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಶಸ್ತ್ರಾಸ್ತ್ರ ರಹಿತ ನಾಗರಿಕರನ್ನು ಹತ್ಯೆಗೈದ ಘಟನೆಯ ವಿಚಾರಣೆ ಕುರಿತಂತೆ ಪಾಕಿಸ್ತಾನ ಮೂಗು ತೂರಿಸುವುದಿಲ್ಲ ಎಂದು ಪಾಕ್ ಮಂಗಳವಾರ ಸ್ಪಷ್ಟಪಡಿಸಿದೆ.
ಢಾಕಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಅಶ್ರಫ್ ಖುರೇಷಿ ಅವರು ಬಾಂಗ್ಲಾದ ಕಾನೂನು ಸಚಿವ ಶಾಫಿಕ್ ಅಹ್ಮದ್ ಅವರನ್ನು ಭೇಟಿಯಾಗಿ, ಸ್ವಾತಂತ್ರ್ಯ ಕದನ ಅಪರಾಧದ ವಿಚಾರಣೆ ಆಂತರಿಕ ವಿಷಯವಾಗಿದ್ದು, ಅದರಲ್ಲಿ ಪಾಕಿಸ್ತಾನ ತಲೆಹಾಕುವುದಿಲ್ಲ ಎಂದು ಖಚಿತಪಡಿಸಿದ್ದಾರೆ.
ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟ ಅಪರಾಧ ವಿಚಾರಣೆ ನಡೆಸುವುದು ಆಂತರಿಕ ವ್ಯವಹಾರಗಳ ವಿಷಯವಾಗಿದೆ. ಆದರೆ ಈ ಪ್ರಕ್ರಿಯೆ ತುಂಬಾ ಪಶ್ಚಾತ್ತಾಪ ಪಡುವಂತದ್ದಾಗಿದೆ ಎಂದು ಇತ್ತೀಚೆಗಷ್ಟೇ ಢಾಕಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಖುರೇಷಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಖುರೇಷಿಯೇ ಉಲ್ಟಾ ಹೊಡೆದಿದ್ದು, ಹೇಳಿಕೆಯನ್ನು ಬದಲಾಯಿಸಿರುವುದಾಗಿ ಬಾಂಗ್ಲಾ ಸಚಿವ ಅಹ್ಮದ್ ತಿರುಗೇಟು ನೀಡಿದ್ದಾರೆ.