ಬ್ರೆಜಿಲ್‌ನಲ್ಲಿ ಭಾರೀ ಮಳೆ, ಭೂಕುಸಿತ; 81ಕ್ಕೂ ಹೆಚ್ಚು ಬಲಿ
ರಿಯೋ ಡಿ ಜನೈರೊ, ಬುಧವಾರ, 7 ಏಪ್ರಿಲ್ 2010( 10:10 IST )
ಬ್ರೆಜಿಲ್‌ನ ರಿಯೋ ಡಿ ಜನೈರೊ ರಾಜ್ಯದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭೂಕುಸಿತ ಮತ್ತಿತರ ಅವಘಢಗಳಿಂದಾಗಿ ಕನಿಷ್ಠ 81 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ.
ಭಾರೀ ಮಳೆಯಿಂದಾಗಿ ನಗರಗಳಲ್ಲಿನ ಉದ್ಯಮವು ಬಹುತೇಕ ಸ್ಥಗಿತಗೊಂಡಿದೆ. ನಗರಗಳಲ್ಲಿನ ವಾಹನ ಸಂಚಾರ ಸಂಪೂರ್ಣವಾಗಿ ನಿಂತಿದೆ. ಬೆಟ್ಟಗುಡ್ಡಗಳ ಇಳಿಜಾರಿನಲ್ಲಿರುವ ಕೊಳೆಗೇರಿಗಳು ಸಂಪೂರ್ಣ ಮುಳುಗಡೆಯಾಗಿದ್ದು, ಹಲವು ಕಡೆಗಳಲ್ಲಿ ರಸ್ತೆಗಳು ಕುಸಿದು ಆಳವಾದ ಕಂದಕಗಳು ನಿರ್ಮಾಣವಾಗಿವೆ. ಕಾಂಕ್ರೀಟ್ ಮತ್ತು ಮರದಿಂದ ನಿರ್ಮಿಸಲಾಗಿರುವ ಮನೆಗಳು ಕೂಡ ಕುಸಿದಿದ್ದು, ಭೂಮಿಯೊಳಗೆ ಇಳಿದು ಹೋಗಿವೆ.
ಭವಿಷ್ಯದ ಒಲಿಂಪಿಕ್ಸ್ ಮತ್ತು ಫುಟ್ಬಾಲ್ ವಿಶ್ವಕಪ್ ಕ್ರೀಡಾಂಗಣಗಳನ್ನು ಹೊಂದಿರುವ ನಗರ ರಿಯೋದ ಮೇಯರ್ ಎಡ್ವಾರ್ಡೊ ಪೇಸ್, ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶ ನೀಡಿದ್ದಾರೆ. ಅಲ್ಲದೆ ಕಾರ್ಮಿಕರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗಡೆ ಬಾರದಂತೆ ಅವರು ಮುನ್ಸೂಚನೆ ನೀಡಿದ್ದಾರೆ.
ಇನ್ನಷ್ಟು ಮಳೆ ಬರುವ ಸಾಧ್ಯತೆಗಳಿದ್ದು, ಹೆಚ್ಚು ಅಪಾಯಗಳನ್ನು ಎದುರಿಸುತ್ತಿರುವ ಪ್ರದೇಶಗಳಲ್ಲಿನ ಜನ ಮನೆಯನ್ನು ಬಿಟ್ಟು ಹೊರಗಡೆ ಬರಬೇಡಿ ಎಂದು ಮೇಯರ್ ತಿಳಿಸಿದ್ದಾರೆ. ಸುಮಾರು 20 ಸೆಂಟಿ ಮೀಟರ್ ಮಳೆಯಾಗಿರುವ ಕಾರಣದಿಂದಾಗಿ ಉಂಟಾದ ಭೂಕುಸಿತಕ್ಕೆ ಕನಿಷ್ಠ 2,000 ಮನೆಗಳು ಹುದುಗಿ ಹೋಗಿವೆ ಎಂದು ವರದಿಗಳು ತಿಳಿಸಿವೆ.
ರಿಯೋ ನಗರದ ರಕ್ಷಣಾ ತಂಡಗಳು ಆಪತ್ತಿನಲ್ಲಿ ಸಿಲುಕಿರುವ ಜನತೆಯ ರಕ್ಷಣೆಯಲ್ಲಿ ತೊಡಗಿದ್ದು, ಅವರ ಪ್ರಕಾರ ಕನಿಷ್ಠ 80 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. 44 ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೆಚ್ಚಿನ ಬಲಿಪಶುಗಳು ಬೆಟ್ಟಗಳ ಬುಡದಲ್ಲಿನ ಆಳವಾದ ಪ್ರದೇಶಗಳಲ್ಲಿ ವಾಸಿಸುತ್ತಿದ್ದವರು. ಭಾರೀ ಪ್ರಮಾಣದ ಮಣ್ಣು ಮತ್ತು ಕಲ್ಲುಗಳ ಅಡಿಯಲ್ಲಿ ಅವರ ಮನೆಗಳು ಹುದುಗಿ ಹೋಗಿವೆ. ಹಾಗಾಗಿ ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆಗಳಿವೆ. ಆದರೆ ಈಗಲೇ ನಾವು ನಿರ್ದಿಷ್ಟ ಸಂಖ್ಯೆಯನ್ನು ಹೇಳುವುದು ಸಾಧ್ಯವಿಲ್ಲ ಎಂದು ನಗರದ ವಕ್ತಾರರೊಬ್ಬರು ತಿಳಿಸಿದ್ದಾರೆ.ಟ