ಇಂಡೋನೇಷಿಯಾದ ಸುಮಾತ್ರ ದ್ವೀಪದ ಉತ್ತರ ಭಾಗದಲ್ಲಿ ಬುಧವಾರ ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ನೀಡಲಾಗಿದ್ದ ಸುನಾಮಿ ಎಚ್ಚರಿಕೆಯನ್ನು ಇದೀಗ ವಾಪಸ್ ಪಡೆಯಲಾಗಿದೆ.
ಸುಮಾರು 1.30 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಉತ್ತರ ಸುಮಾತ್ರ ಪ್ರದೇಶದಲ್ಲಿ (ಸುಮಾತ್ರ ದ್ವೀಪದಲ್ಲಿ ಒಟ್ಟು 10 ಪ್ರಾಂತ್ಯಗಳಿವೆ, ಅದರಲ್ಲಿ ಒಂದು ಉತ್ತರ ಸುಮಾತ್ರ) ಈ ಭೂಕಂಪನ ಸಂಭವಿಸಿದ್ದು, ಆಸ್ತಿ-ಪಾಸ್ತಿ ಹಾನಿಯಾಗಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ.
ಇಂಡೋನೇಷಿಯಾ ಕಾಲಮಾನದ ಪ್ರಕಾರ ಮುಂಜಾನೆ 5.15ಕ್ಕೆ ಘಟಿಸಿರುವ ಈ ಭೂಕಂಪ ಭೂಮಿಯ 46 ಕಿಲೋ ಮೀಟರ್ ಆಳದಲ್ಲಿ ಹಾಗೂ ಸುಮಾತ್ರ ಕರಾವಳಿಯ ಸಿಬೋಲ್ಗಾದ ವಾಯುವ್ಯಕ್ಕೆ 204 ಕಿಲೋ ಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಅಮೆರಿಕಾ ಭೂಗರ್ಭ ವಿಚಕ್ಷಣಾಲಯ ತಿಳಿಸಿದೆ.
ಭೂಕಂಪದ ಹಿನ್ನೆಲೆಯಲ್ಲಿ ಪೆಸಿಪಿಕ್ ಸುನಾಮಿ ಎಚ್ಚರಿಕಾ ಕೇಂದ್ರವು ಸ್ಥಳೀಯರಿಗೆ ಎಚ್ಚರದಿಂದಿರುವಂತೆ ಸಂದೇಶ ರವಾನಿಸಿತ್ತು. ಆದರೆ ಭೂಕಂಪದ ಬಳಿಕ ಕಟ್ಟೆಚ್ಚರವನ್ನು ವಾಪಸ್ ಪಡೆದುಕೊಳ್ಳಲಾಗಿದೆ.
ಈ ಪ್ರದೇಶದಲ್ಲಿ ಮೂರು ಬಾರಿ ಭೂಮಿ ಪ್ರಬಲವಾಗಿ ಕಂಪಿಸಿದ ಬಗ್ಗೆ ವರದಿಗಳಾಗಿವೆ. ಆದರೆ ಯಾವುದೇ ಸಾವು-ನೋವುಗಳು ಸಂಭವಿಸಿದ ಬಗ್ಗೆ ಮಾಹಿತಿಗಳು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಸುಮಾತ್ರ ದ್ವೀಪದಲ್ಲಿ ನಡೆದ ಭೂಕಂಪದಿಂದಾದಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟಿದ್ದರು. ಸುಮಾತ್ರ ದ್ವೀಪದ ಉತ್ತರ ಭಾಗದಲ್ಲಿ 2008ರ ಮಾರ್ಚ್‌ನಲ್ಲಿ ಕೊನೆಯ ಬಾರಿ ಭೂಕಂಪನದ ಅನುಭವವಾಗಿತ್ತು.
2004ರ ಡಿಸೆಂಬರ್ ತಿಂಗಳಲ್ಲಿ 9.1 ತೀವ್ರತೆಯ ಭೂಕಂಪದ ಪರಿಣಾಮ ಸುನಾಮಿ ಭಾರತೀಯ ಸಾಗರದಿಂದ ಅಪ್ಪಳಿಸಿತ್ತು. ಪರಿಣಾಮ ಇಂಡೋನೇಷಿಯಾ, ಶ್ರೀಲಂಕಾ, ಭಾರತ ಮತ್ತು ಥಾಯ್ಲೆಂಡ್ ಸೇರಿದಂತೆ 13 ದೇಶಗಳ ಸುಮಾರು 10 ಲಕ್ಷ ಮಂದಿ ಸಾವನ್ನಪ್ಪಿದ್ದರು.