ಆಡಳಿತಾರೂಢ ನೇಪಾಳ ಸರ್ಕಾರ ಕೂಡಲೇ ಅಧಿಕಾರವನ್ನು ತ್ಯಜಿಸಬೇಕೆಂದು ಆಗ್ರಹಿಸಿರುವ ಮಾವೋ ಮುಖಂಡ ಪ್ರಚಂಡ ಅವರು, ಇಲ್ಲದಿದ್ದಲ್ಲಿ ಶಾಂತಿ ಪ್ರಕ್ರಿಯೆಯನ್ನು ರಕ್ಷಿಸುವಲ್ಲಿ ಆತ್ಮವಿಶ್ವಾಸ ಕಳೆದುಕೊಂಡಿರುವ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನೇಪಾಳದಲ್ಲಿನ ಶಾಂತಿ ಪ್ರಕ್ರಿಯೆಗೆ 22ಪಕ್ಷಗಳ ಆಡಳಿತಾರೂಢ ನೇಪಾಳ ಸರ್ಕಾರದ ಪ್ರಧಾನಿ ಮಾಧವ್ ಕುಮಾರ್ ಅವರು ಅಡ್ಡಿ ಪಡಿಸುತ್ತಿರುವುದಾಗಿ ಪ್ರಚಂಡ ಆರೋಪಿಸಿದ್ದಾರೆ.
ನೇಪಾಳದ ಇತಿಹಾಸದಲ್ಲಿಯೇ ಅತ್ಯಂತ ಅಯೋಗ್ಯ ಮತ್ತು ಭ್ರಷ್ಟ ಸರ್ಕಾರ ಇದಾಗಿದೆ ಎಂದು ಮಾವೋವಾದಿ ಬೆಂಬಲಿಗರ ರಾಲಿಯನ್ನು ಉದ್ದೇಶಿಸಿ ಅವರು ಕಿಡಿಕಾರಿದರು.
ಆ ನಿಟ್ಟಿನಲ್ಲಿ ಆಡಳಿತಾರೂಢ ನೇಪಾಳ ಸರ್ಕಾರ ಕೂಡಲೇ ಅಧಿಕಾರ ತ್ಯಜಿಸಿ, ರಾಷ್ಟ್ರದ ಹಿತದೃಷ್ಟಿಯಿಂದ ಮಾವೋ ಬೆಂಬಲಿತ ಪಕ್ಷಕ್ಕೆ ಸಿಪಿಎನ್-ಯುಎಂಎಲ್ ಕೈಜೋಡಿಸುವ ಮೂಲಕ ರಾಷ್ಟ್ರೀಯ ಐಕ್ಯತಾ ಸರ್ಕಾರ ರಚನೆಗೆ ಮುಂದಾಗಬೇಕೆಂದು ಪ್ರಚಂಡ ಈ ಸಂದರ್ಭದಲ್ಲಿ ಒತ್ತಾಯಿಸಿದರು.