ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ವೆಬ್‌ಸೈಟುಗಳನ್ನು ಹ್ಯಾಕ್ ಮಾಡಿಲ್ಲ: ಚೀನಾ ಸ್ಪಷ್ಟನೆ (China | hacking | Indian defence websites | Jiang Yu)
Bookmark and Share Feedback Print
 
ಭಾರತೀಯ ರಕ್ಷಣಾ ಸಚಿವಾಲಯ ಮತ್ತು ವಿಶ್ವದಾದ್ಯಂತ ಇರುವ ರಾಯಭಾರ ಕಚೇರಿಗಳಲ್ಲಿನ ಉನ್ನತ ರಹಸ್ಯ ದಾಖಲೆಗಳನ್ನು ಚೀನಾ ಹ್ಯಾಕರುಗಳು ಅಪಹರಿಸಿದ್ದಾರೆ ಎಂಬ ವರದಿಗಳನ್ನು ಚೀನಾ ತಳ್ಳಿ ಹಾಕಿದ್ದು, ಅಂತಾರಾಷ್ಟ್ರೀಯ ಅಪರಾಧವೆಂದು ಪರಿಗಣಿಸಿರುವ ಹ್ಯಾಕಿಂಗ್‌ನ್ನು ತೀವ್ರವಾಗಿ ವಿರೋಧಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ.

ಇಂತಹ ಸುದ್ದಿಗಳನ್ನು ನಾವು ಆಗಾಗ ಕೇಳುತ್ತಿದ್ದೇವೆ. ಯಾವ ಕಾರಣಕ್ಕಾಗಿ ಇಂತಹ ವಿವಾದಗಳನ್ನು ಹುಟ್ಟು ಹಾಕಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಿಯಾಂಗ್ ಯೂ ತಿಳಿಸಿದ್ದಾರೆ.

ಭಾರತ ಸರಕಾರ, ಉದ್ಯಮ, ಶೈಕ್ಷಣಿಕ ಮತ್ತು ಇತರ ಕಂಪ್ಯೂಟರ್ ವ್ಯವಸ್ಥೆಗಳಿಗೆ ಚೀನಾದಲ್ಲಿನ ಸರ್ವರ್‌ಗಳಿಂದ ವ್ಯವಸ್ಥಿತವಾಗಿ ಸೈಬರ್ ಮೂಲಕ ಬೇಹುಗಾರಿಕೆ ನಡೆಸಲಾಗಿದೆ ಎಂದು ಟೊರಂಟೋ ವಿಶ್ವವಿದ್ಯಾಲಯದ ಕೆನಡಾ ಮತ್ತು ಅಮೆರಿಕಾ ಅಧ್ಯಯನಕಾರರು ಸಿದ್ಧಪಡಿಸಿರುವ ವರದಿಯಲ್ಲಿ ಆರೋಪಿಸಲಾಗಿತ್ತು.

ಚೀನಾ ಹ್ಯಾಕಿಂಗ್ ಚಟುವಟಿಕೆಗಳ ಬಗ್ಗೆ ಉದ್ದೇಶಪೂರ್ವಕವಾಗಿ ಕೆಲವು ಪಟ್ಟಭದ್ರ ವ್ಯಕ್ತಿಗಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಇಂಟರ್ನೆಟ್ ಮೂಲಕ ನಡೆಸುವ ಎಲ್ಲಾ ರೀತಿಯ ಹ್ಯಾಕಿಂಗ್ ಚಟುವಟಿಕೆಗಳನ್ನು ನಾವು ದೃಢವಾಗಿ ವಿರೋಧಿಸುತ್ತಾ ಬಂದಿದ್ದೇವೆ. ಹಾಗಾಗಿ ಈ ಕುರಿತು ನಮ್ಮ ನಿಲುವು ಸ್ಪಷ್ಟವಾಗಿದೆ. ಹ್ಯಾಕಿಂಗ್ ಎನ್ನುವುದು ಅಂತಾರಾಷ್ಟ್ರೀಯ ಅಪರಾಧಿ ಕೃತ್ಯವಾಗಿದ್ದು, ಇದನ್ನು ಮಟ್ಟ ಹಾಕಲು ಎಲ್ಲಾ ದೇಶಗಳು ಒಟ್ಟಾಗಿ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದರು.

ಹ್ಯಾಕಿಂಗ್ ಚಟುವಟಿಕೆಗಳನ್ನು ಅಂತಾರಾಷ್ಟ್ರೀಯ ವಲಯದಲ್ಲಿ ಮಟ್ಟ ಹಾಕಲು ಚೀನಾ ಈಗಾಗಲೇ ನಿರಂತರ ಶ್ರಮ ವಹಿಸುತ್ತಿದೆ. ಈ ಕುರಿತು ಅಪೆಕ್ ಸೇರಿದಂತೆ ಇತರ ವೇದಿಕೆಗಳಲ್ಲಿ ನಾವು ದನಿಯೆತ್ತಿದ್ದೇವೆ. ಇಂತಹ ಕೃತ್ಯಗಳನ್ನು ಮಟ್ಟ ಹಾಕಲು ನಾವು ಗಮನಾರ್ಹ ರೀತಿಯಲ್ಲಿ ಪೂರಕ ಸಹಕಾರ ನೀಡುತ್ತಾ ಬಂದಿದ್ದೇವೆ ಎಂದು ಜಿಯಾಂಗ್ ತಿಳಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಈ ವಿಚಾರವನ್ನು ಈಗಾಗಲೇ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ತಿಳಿಸಿರುವ ವಿದೇಶಾಂಗ ಸಚಿವಾಲಯದ ಅಧಿಕಾರಿ, ಇಂತಹ ಸುದ್ದಿಗಳನ್ನು ಹಬ್ಬಿಸುತ್ತಿರುವ ಮಂದಿ ಚೀನಾದ ಅಧಿಕೃತ ಮೂಲಗಳನ್ನು ತಿಳಿಸಿಲ್ಲ. ಯಾವ ಕಾರಣಕ್ಕಾಗಿ ಇಂತಹ ಮಾಧ್ಯಮ ವರದಿಗಳು ಹುಟ್ಟಿಕೊಳ್ಳುತ್ತಿವೆ ಎಂದು ತಿಳಿಯುತ್ತಿಲ್ಲ ಎಂದು ಜಿಯಾಂಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ