ತನ್ನನ್ನು ಮದುವೆಯಾಗಲು ನಿರಾಕರಿಸಿದ 16ರ ಹರೆಯದ ಶಾಲಾ ಬಾಲಕಿಯೊಬ್ಬಳನ್ನು ಹುಚ್ಚು ಪ್ರೇಮಿಯೊಬ್ಬ ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆ ಸೆಂಟ್ರಲ್ ಬಾಂಗ್ಲಾದ ಜಿಲ್ಲೆಯೊಂದರಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಹತ್ತನೆ ತರಗತಿ ವಿದ್ಯಾರ್ಥಿನಿ ಮಾರಿಯಮ್ ಅಕ್ತರ್ ಪಿಂಕಿಯ ಮೇಲೆ ಸೀಮೆಎಣ್ಣೆ ಸುರಿದು ಯುವಕ ಪರಾರಿಯಾಗಿದ್ದ. ತದನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ ಎಂದು ಮಾಧ್ಯಮದ ವರದಿಯೊಂದು ವಿವರಿಸಿದೆ.
ಏತನ್ಮಧ್ಯೆ ಘಟನೆಗೆ ಸಂಬಂಧಿಸಿದಂತೆ ಬಾಲಕಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಆದರೆ ಪ್ರಿಯಕರ ತನ್ನ ಕೋಣೆಯೊಳಗೆ ಬಲವಂತವಾಗಿ ನುಗ್ಗಿ, ಮದುವೆಯಾಗುವಂತೆ ಕೇಳಿದಾಗ, ತಾನು ನಿರಾಕರಿಸಿದಾಗ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವುದಾಗಿ ಪಿಂಕಿ ಸಾಯುವ ಮುನ್ನ ಢಾಕಾ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.
ಶಾಲಾ ಬಾಲಕಿಯನ್ನು ಸೀಮೆಎಣ್ಣೆ ಸುರಿದು ಅಮಾನವೀಯವಾಗಿ ಕೊಂದಿರುವ ಘಟನೆಗೆ ಸಂಬಂಧಿಸಿದಂತೆ 25ರ ಹರೆಯದ ಯುವಕನ ಪತ್ತೆಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.