ಸಿಖ್ ವಿರೋಧಿ ಗಲಭೆ; ಕಮಲನಾಥ್ ವಿರುದ್ಧ ಅಮೆರಿಕಾದಲ್ಲಿ ಕೇಸ್
ನ್ಯೂಯಾರ್ಕ್, ಬುಧವಾರ, 7 ಏಪ್ರಿಲ್ 2010( 18:01 IST )
1984ರ ಸಿಖ್ ವಿರೋಧಿ ಹಿಂಚಾಚಾರಕ್ಕೆ ಸಂಬಂಧಪಟ್ಟಂತೆ ಸಿಖ್ ಸಂಘಟನೆಯೊಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ಕಮಲನಾಥ್ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಅಮೆರಿಕಾದ ಫೆಡರಲ್ ಜಿಲ್ಲಾ ನ್ಯಾಯಾಲಯವೊಂದು ಸಮನ್ಸ್ ಜಾರಿಗೊಳಿಸಿದೆ.
ವಿದೇಶಿ ಅಪರಾಧ ಪ್ರತಿಪಾದನೆ ಕಾನೂನಿನ ಅಡಿಯಲ್ಲಿ ದಾಖಲಿಸಲಾಗಿರುವ ಸಿವಿಲ್ ಪ್ರಕರಣದಲ್ಲಿ ಅಮಾನವೀಯತೆ, ಕೀಳಾಗಿ ನಡೆಸಿಕೊಂಡಿರುವುದು ಮತ್ತು ಕಾನೂನುಬಾಹಿರ ಹತ್ಯೆಗಳು ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದ್ದು, ಗರಿಷ್ಠ ಪರಿಹಾರ ಮತ್ತು ಶಿಕ್ಷೆಯನ್ನು ನೀಡುವಂತೆ ಕೋರಲಾಗಿದೆ.
ಅದೇ ಹೊತ್ತಿಗೆ ಭಾರತದಲ್ಲಿ ನಡೆದ ಸಿಖ್ ವಿರೋಧಿ ಗಲಭೆಯ 25 ವರ್ಷಗಳ ನಂತರ ಪ್ರಕರಣ ದಾಖಲಾಗಿರುವುದಕ್ಕೆ ಪ್ರಸಕ್ತ ಅಮೆರಿಕಾ ಪ್ರವಾಸದಲ್ಲಿರುವ ಕಮಲನಾಥ್ ಅಚ್ಚರಿ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ.
ನಿಜಕ್ಕೂ ಇದರ ಬಗ್ಗೆ ನನಗೆ ಯಾವುದೇ ಸುಳಿವು ಇರಲಿಲ್ಲ. ಇದಕ್ಕಿರುವ ಆಧಾರ ಮತ್ತು ವಿಶ್ವಾಸಾರ್ಹತೆ ಬಗ್ಗೆಯೂ ನನಗೇನೂ ತಿಳಿದಿಲ್ಲ. ಇದರ ಕಾಲಾವಧಿಯ ಮಾಹಿತಿಯೂ ನನ್ನಲ್ಲಿಲ್ಲ. ಪ್ರಕರಣದ ಬಗ್ಗೆ ಕೇಳುತ್ತಿರುವುದು ಇದೇ ಮೊದಲು ಎಂದು ದಾವೆಯ ಕುರಿತು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ನಾಥ್ ಅವರಿಗೆ ಇದೀಗ ನೊಟೀಸ್ ಜಾರಿ ಮಾಡಲಾಗಿದ್ದು, 21 ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಆದೇಶ ನೀಡಲಾಗಿದೆ. ತಪ್ಪಿದಲ್ಲಿ ನ್ಯಾಯಾಲಯವು ಪ್ರಮಾದವೆಸಗಿದ ತೀರ್ಪನ್ನು ಪ್ರಕರಣದಲ್ಲಿ ನೀಡಲಿದೆ.
ಪ್ರಕರಣದ ಕುರಿತು ನಾನು ಇನ್ನಷ್ಟು ಅಧ್ಯಯನ ನಡೆಸಬೇಕಿದೆ. ಒಂದು ಲಿಖಿತ ದಾಖಲೆಯನ್ನು ನನಗೆ ನೀಡಲಾಗಿದೆ. ಅದನ್ನು ಸಂಪೂರ್ಣವಾಗಿ ಓದಿದ ನಂತರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದು ನಾಥ್ ತಿಳಿಸಿದ್ದಾರೆ.
ಭಾರತದಲ್ಲಿ ಘಟನೆ ನಡೆದು ಎರಡು ದಶಕಗಳೇ ಕಳೆದಿದ್ದರೂ ಇದುವರೆಗೂ ಸ್ವಂತ ದೇಶದಲ್ಲಿ ನನ್ನ ಮೇಲೆ ಯಾರೂ ಆರೋಪ ಹೊರಿಸಿಲ್ಲ. ನಾನು ಅಂತಹ ಯಾವುದೇ ಘಟನೆಯಲ್ಲಿ ಪಾಲ್ಗೊಂಡಿಲ್ಲ. ಇದೀಗ ಒಮ್ಮಿಂದೊಮ್ಮೆಲೆ 2010ರಲ್ಲಿ ನಾನು ಪಾಲ್ಗೊಂಡಿರುವುದು ಹೇಗೆ? ಇದೀಗ ವಿದೇಶದಲ್ಲಿ ಪ್ರಕರಣ ದಾಖಲಿಸಲಾಗಿದೆ. ಏನೊಂದೂ ನನಗೆ ಅರ್ಥವಾಗುತ್ತಿಲ್ಲ ಎಂದು ಸಚಿವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.