ಉತ್ತರ ವಜಿರಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್ ಮುಖಂಡ ಜಲಾಲುದ್ದೀನ್ ಹಕ್ಕಾನಿ ಸೇರಿದಂತೆ ಹಲವು ಮುಖಂಡರ ಸಂದರ್ಶನಕ್ಕೆ ತೆರಳಿದ್ದ ಐಎಸ್ಐನ ಇಬ್ಬರು ಮಾಜಿ ಅಧಿಕಾರಿಗಳು ಹಾಗೂ ಬ್ರಿಟಿಷ್ ಟಿವಿ ಪತ್ರಕರ್ತನೊಬ್ಬ ನಾಪತ್ತೆಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಐಎಸ್ಐನ ನಿವೃತ್ತ ಅಧಿಕಾರಿ ಖಾಲಿದ್ ಖ್ವಾಜಾ, ನಿವೃತ್ತ ಕರ್ನಲ್ ಇಮಾಮ್ ಅಲಿಯಾಸ್ ಅಮಿರ್ ಸುಲ್ತಾನ್ ತಾರಾರ್ ಹಾಗೂ ಬ್ರಿಟನ್‌ನ ಚಾನೆಲ್ 4ನ ಪತ್ರಕರ್ತ ಅಸಾದ್ ಖುರೇಷಿ ಮಾರ್ಚ್ 25ರಂದು ತಾಲಿಬಾನ್ ಮುಖಂಡ ಹಕ್ಕಾನಿ ಸೇರಿದಂತೆ ಹಲವರನ್ನು ಸಂದರ್ಶಿಸಲು ತೆರಳಿದ್ದರು.
ಮಾರ್ಚ್ 26ರಂದು ನಾನು ನನ್ನ ತಂದೆಯ ಕೊನೆಯ ಮೊಬೈಲ್ ಕರೆಯನ್ನು ಸ್ವೀಕರಿಸಿದ್ದೇನೆ ಎಂದು ತಿಳಿಸಿರುವ ಖಾಲಿದ್ ಖ್ವಾಜಾ ಪುತ್ರ ಒಸಾಮಾ, ತಾನು ಮತ್ತು ತನ್ನಿಬ್ಬರು ಗೆಳೆಯರು ಉತ್ತರ ವಜಿರಿಸ್ತಾನದತ್ತ ತಾಲಿಬಾನ್ ಮುಖಂಡರನ್ನು ಸಂದರ್ಶಿಸಲು ತೆರಳುತ್ತಿರುವುದಾಗಿ ತಿಳಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.