ವಾಷಿಂಗ್ಟನ್‌ನಿಂದ ಡೆನ್ವೆರ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಕತಾರ್ ರಾಯಭಾರಿ ಎಂದು ಹೇಳಲಾಗಿರುವ ವ್ಯಕ್ತಿಯೊಬ್ಬ 'ಶೂ ಬಾಂಬ್' ಸ್ಫೋಟಿಸಲು ಯತ್ನಿಸಿದ್ದಾನೆ ಎಂದು ಅಮೆರಿಕಾ ಅಧಿಕಾರಿಗಳು ಆರೋಪಿಸಿದ್ದು, ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ ಎಂದೂ ಮೂಲಗಳು ತಿಳಿಸಿವೆ.
ವಾಷಿಂಗ್ಟನ್ ರಾಜ್ಯದ ರೇಗಾನ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಲಾರೆಡೋ ರಾಜ್ಯದ ಡೆನ್ವೆರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಶೂಗಳಿಗೆ ಬೆಂಕಿ ಹಚ್ಚಲು ಯತ್ನಿಸಿದ್ದನ್ನು ಗಮನಿಸಿದ ಭದ್ರತಾ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡ ನಂತರ ಆತ ವಾಷಿಂಗ್ಟನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕತಾರ್ ರಾಯಭಾರಿ ಎಂದು ತಿಳಿದು ಬಂದಿತ್ತು.
ವ್ಯಕ್ತಿಯನ್ನು ವಿಮಾನದಲ್ಲೇ ದಿಗ್ಬಂಧನಕ್ಕೊಳಪಡಿಸಿದ ಅಧಿಕಾರಿಗಳು ಡೆನ್ವೆರ್ ವಿಮಾನ ನಿಲ್ದಾಣದವರೆಗೆ ಯಾವುದೇ ಅಪಾಯ ಸಂಭವಿಸದಂತೆ ಕಟ್ಟೆಚ್ಚರ ವಹಿಸಿದ್ದರು. ಅತ್ತ ವಿಮಾನ ಡೆನ್ವೆರ್‌ನಲ್ಲಿ ಇಳಿಯುತ್ತಿದ್ದಂತೆ ಭದ್ರತಾ ವಾಹನಗಳು ಸುತ್ತುವರಿದು, ಶಂಕಿತ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡವು ಎಂದು ವರದಿಗಳು ತಿಳಿಸಿವೆ.
'ಯುನೈಟೆಡ್ ಏರ್‌ಲೈನ್ಸ್ 663' ವಿಮಾನ ಪ್ರಯಾಣದ ಸಂದರ್ಭದಲ್ಲಿ ನಡೆದಿರುವ ಘಟನೆಯನ್ನು ಸಾರಿಗೆ ಭದ್ರತಾ ಆಡಳಿತವು ತನಿಖೆ ನಡೆಸುತ್ತಿದೆ. ವಿಮಾನದಲ್ಲಿನ ಏರ್ ಮಾರ್ಷಲ್‌ಗಳಿಂದ ವ್ಯಕ್ತಿಯೊಬ್ಬ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳ ಆರಂಭಿಕ ಮಾಹಿತಿ ಪಡೆದುಕೊಂಡ ನಂತರ ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕತಾರ್ ರಾಜತಾಂತ್ರಿಕ ಪ್ರತಿನಿಧಿ ಎಂದು ಗುರುತಿಸಲಾಗಿರುವ ಶಂಕಿತ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಅಮೆರಿಕಾದಲ್ಲಿದ್ದ. ಘಟನೆಯ ಕುರಿತು ಇದುವರೆಗೆ ಯಾವುದೇ ಸ್ಪಷ್ಟ ವರದಿ ಬಂದಿಲ್ಲ. ಆತ ನಿಜಕ್ಕೂ ಬೆಂಕಿ ಹಚ್ಚಿ ದುರಂತ ಸೃಷ್ಟಿಸಲು ಯತ್ನಿಸಿದ್ದನೋ, ಬಾಂಬ್ ಸ್ಫೋಟಕ್ಕೆ ಯತ್ನಿಸಿದ್ದನೋ ಅಥವಾ ತೀರಾ ಮುಗ್ಧನಂತೆ ಸಿಗರೇಟು ಹೊತ್ತಿಸಲು ಯತ್ನಿಸಿದ್ದನೋ ಎಂಬುದು ತನಿಖೆಯ ನಂತರವಷ್ಟೇ ತಿಳಿದು ಬರಲಿದೆ.
ಹಾಗಾಗಿ ಇದು ಭಯೋತ್ಪಾದನಾ ಕೃತ್ಯ ಅಥವಾ ಶಂಕಿತನೆಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಸಮಗ್ರ ತನಿಖೆಯ ನಂತರ ವಿವರಗಳನ್ನು ಒದಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.