ಪಾಕಿಸ್ತಾನವು ಸ್ವತಂತ್ರ ಜಮ್ಮು-ಕಾಶ್ಮೀರ (ಎಜೆಕೆ) ಎಂದು ಕರೆಯುವ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ನ್ಯಾಯಾಂಗ ಬಿಕ್ಕಟ್ಟು ಹೊಸ ತಿರುವು ಪಡೆದುಕೊಂಡಿದ್ದು, ಎಜೆಕೆ ಅಧ್ಯಕ್ಷರು ಹಾಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ವಿರುದ್ಧ ಪರ್ಯಾಯ ನ್ಯಾಯಾಂಗ ಸಮಿತಿ (ಎಸ್‌ಜೆಸಿ)ಯಲ್ಲಿ 'ಸಂವಿಧಾನ ಉಲ್ಲಂಘಿಸಿದ್ದಾರೆ' ಎಂಬ ಉಲ್ಲೇಖ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ.
ಈ (ಎಸ್‌ಜೆಸಿ) ಸಮಿತಿಯನ್ನು ಮಂಗಳವಾರ ರಾತ್ರಿ ರಚಿಸಿದವರು ಎಜೆಕೆ ಅಧ್ಯಕ್ಷ ರಾಜಾ ಜುಲ್ಖರ್ನೇನ್ ಖಾನ್. ಕಾರ್ಯ-ರಹಿತ ಮುಖ್ಯ ನ್ಯಾಯಾಧೀಶ ರಿಯಾಜ್ ಅಖ್ತರ್ ಚೌಧರಿ ಅವರನ್ನು ಅದರ ಮುಖ್ಯಸ್ಥರನ್ನಾಗಿ ಮತ್ತು ಎಜೆಕೆ ಸುಪ್ರೀಕೋರ್ಟಿನ ನ್ಯಾಯಮೂರ್ತಿ ಖ್ವಾಜಾ ಶಹಾದ್ ಅಹ್ಮದ್ ಮತ್ತು ಎಜೆಕೆ ಹೈಕೋರ್ಟಿನ ನ್ಯಾಯಮೂರ್ತಿ ಯೂನಿಸ್ ತಾಹಿರ್ ಅವರನ್ನು ಸದಸ್ಯರನ್ನಾಗಿ ನಿಯುಕ್ತಿಗೊಳಿಸಲಾಗಿತ್ತು. ಇದು 'ಅಸಾಂವಿಧಾನಿಕ' ಎಂದು ಬಣ್ಣಿಸಿದ ಎಜೆಕೆ ಸರಕಾರವು, ಈ ಕ್ರಮವನ್ನು ರದ್ದುಗೊಳಿಸಿತ್ತು. ಅಧಿಕೃತ ವಕ್ತಾರರ ಪ್ರಕಾರ, ಸರಕಾರದ ಸಲಹೆಯಿಲ್ಲದೆ ಅಧ್ಯಕ್ಷರು ತಾವಾಗಿಯೇ ಇಂತಹ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ.
ಇದೀಗ ನ್ಯಾಯಾಂಗ ಸಿಬ್ಬಂದಿಗಳು ಈ ಕ್ರಮವನ್ನು ಖಂಡಿಸಿ, ಪ್ರತಿಭಟನೆ ನಡೆಸಿದ್ದಾರೆ.