ಭಾರತಕ್ಕೆ ಗುತ್ತಿಗೆ: ನೇಪಾಳ ಪ್ರಧಾನಿಗೆ ಸುಪ್ರೀಂ ಕೋರ್ಟ್ ಸಮನ್ಸ್
ಕಾಠ್ಮಂಡು, ಗುರುವಾರ, 8 ಏಪ್ರಿಲ್ 2010( 18:40 IST )
ಭಾರತೀಯ ಕಂಪನಿಯೊಂದಿಗೆ ನೇಪಾಳ ಸರಕಾರವು ಸಹಿ ಹಾಕಿದ ಪಾಸ್‌ಪೋರ್ಟ್ ಗುತ್ತಿಗೆಯಿಂದ ಎದ್ದ ವಿವಾದವು ಮತ್ತಷ್ಟು ಉಲ್ಬಣಗೊಂಡಿದ್ದು, ಈ ಕುರಿತು ವಿವರಣೆ ನೀಡುವಂತೆ ಅಲ್ಲಿನ ಪ್ರಧಾನಿ ಹಾಗೂ ವಿದೇಶಾಂಗ ಸಚಿವರಿಗೆ ನೇಪಾಳದ ಸರ್ವೋಚ್ಚ ನ್ಯಾಯಾಲಯವು ಸಮನ್ಸ್ ಕಳುಹಿಸುವಲ್ಲಿಗೆ ತಲುಪಿದೆ. ಮತ್ತು ಇದೀಗ ಪ್ರತಿಪಕ್ಷ ಮಾವೋವಾದಿಗಳು ಬಹಿರಂಗ ಪ್ರತಿಭಟನಾ ಪ್ರದರ್ಶನಗಳನ್ನು ಆರಂಭಿಸಿದ್ದಾರೆ.
ವಿವಾದ ಪರಿಹಾರವಾಗುವವರೆಗೂ ಒಪ್ಪಂದ ಅಮಾನತುಗೊಳಿಸುವಂತೆ ಸುಪ್ರೀಂಕೋರ್ಟು ಸರಕಾರಕ್ಕೆ ಸೂಚಿಸಿದ್ದು, ಸೋಮವಾರ ವಿವರಣೆ ನೀಡುವಂತೆ ಪ್ರಧಾನಿ ಮಾಧವ ಕುಮಾರ್ ನೇಪಾಳ್ ಅವರಿಗೆ ಸೂಚಿಸಿದೆ. ಅಂತೆಯೇ ಉಪಪ್ರಧಾನಿಯೂ ಆಗಿರುವ ವಿದೇಶಾಂಗ ಮಂತ್ರಿ ಸುಜಾತ ಕೊಯಿರಾಲ ಅವರಿಗೂ ಸಮನ್ಸ್ ನೀಡಲಾಗಿದೆ.
ನೇಪಾಳದ ಹೊಸ ಪಾಸ್‌ಪೋರ್ಟ್ ಮುದ್ರಣದ ಗುತ್ತಿಗೆಯನ್ನು ಭಾರತದ ಸರಕಾರಿ ಸ್ವಾಮ್ಯದ ಸೆಕ್ಯುರಿಟಿ ಪ್ರಿಂಟಿಂಗ್ ಆಂಡ್ ಮಿಂಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಸಂಸ್ಥೆಗೆ ನೀಡುವ ಕುರಿತಾದ ಗುತ್ತಿಗೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇದು ಅಕ್ರಮವಾಗಿದ್ದು, ನೇಪಾಳದ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಂತಾಗಿದೆ ಎಂದು ವಾದಿಸಲಾಗಿತ್ತು.
ಒಪ್ಪಂದಕ್ಕೆ ಸಹಿ ಹಾಕದಂತೆ ತಾನು ನಿರ್ದೇಶನ ನೀಡಿದ್ದರೂ ಕೇಳದ ಸರಕಾರದ ಮೇಲೆ ಕ್ರಮ ಕೈಗೊಳ್ಳಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಯೋಚಿಸುತ್ತಿದೆ. ಮಾವೋವಾದಿ ಪಕ್ಷ ಮತ್ತು ಪ್ರಧಾನಿಯವರ ಕಮ್ಯೂನಿಷ್ಟ್ ಪಾರ್ಟಿ ಆಫ್ ನೇಪಾಳ-ಯೂನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್ ಕೂಡ ಒಪ್ಪಂದಕ್ಕೆ ವಿರುದ್ಧವೇ ಇದ್ದರೆ, ಕೆಲವು ಸಂಸದರು ಒಪ್ಪಂದ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದರು. ಇಲ್ಲದಿದ್ದರೆ ಭಾರತದೊಂದಿಗಿನ ಸಂಬಂಧ ಕೆಡುತ್ತದೆ ಎಂಬುದು ಅವರ ವಾದವಾಗಿತ್ತು.