ಶ್ರೀಲಂಕಾದ ಯುದ್ಧೋತ್ತರ ಕಾಲದ ಸ್ಥಿತಿಗತಿ ನಿರ್ಧರಿಸಲು ಅಥವಾ ಲಂಕಾ ಅಧ್ಯಕ್ಷರ ಅಧಿಕಾರವನ್ನು ಒರೆಗೆ ಹಚ್ಚುವ ಸಂಸದೀಯ ಚುನಾವಣೆಗಳು ಗುರುವಾರ ನಡೆದಿದ್ದು, ಮಧ್ಯರಾತ್ರಿಯೇ ಫಲಿತಾಂಶಗಳು ಹೊರಬರಲು ಆರಂಭಿಸಲಿವೆ.
ಮೂರು ತಿಂಗಳ ಹಿಂದೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿಯಾಗಿಯೇ ಜನರಿಂದ ಪುನರಾಯ್ಕೆಗೊಂಡಿದ್ದ ಮಹಿಂದಾ ರಾಜಪಕ್ಷೆ, ಇದೀಗ ತಮ್ಮ ಪಕ್ಷಕ್ಕೆ ಮೂರನೇ ಎರಡಂಶ ಸಂಸದೀಯ ಬಹುಮತ ದೊರಕಿಸಿಕೊಡುವತ್ತ ದೃಷ್ಟಿ ನೆಟ್ಟಿದ್ದಾರೆ. ಪಕ್ಷಕ್ಕೆ ಈ ಬಹುಮತ ಲಭಿಸಿದರೆ ಸಂವಿಧಾನ ಬದಲಾಯಿಸುವ ಪೂರ್ಣಾಧಿಕಾರವು ಒಂದು ಪಕ್ಷಕ್ಕೇ ದೊರೆತಂತಾಗುತ್ತದೆ. ಈಗ ಇರುವುದು ಅಲ್ಲಿ ಸಮ್ಮಿಶ್ರ ಸರಕಾರ.
ರಾಜಪಕ್ಷೆ ಅವರ ಚುನಾವಣಾ ಎದುರಾಳಿಯನ್ನು ಜೈಲಿಗೆ ಹಾಕಲಾಗಿದ್ದು, ಕೋರ್ಟ್ ಮಾರ್ಷಲ್‌ಗೆ ಒಳಪಡಿಸಲಾಗುತ್ತಿರುವುದರಿಂದ ಸಮ್ಮಿಶ್ರ ಸರಕಾರವು ತೀವ್ರ ಟೀಕೆಗೆ ಗುರಿಯಾಗಿತ್ತು.
ರಾಜಪಕ್ಷೆ ಅಧಿಕಾರಾವಧಿ ಮುಗಿಯುವ 2017ರ ನಂತರವೂ ಅಧಿಕಾರದಲ್ಲಿರಲು ಸಾಧ್ಯವಾಗುವಂತೆ ರಾಜಪಕ್ಷೆ ಸಂವಿಧಾನ ತಿದ್ದುಪಡಿ ಮಾಡಬಹುದು ಎಂಬ ಆತಂಕ ಪ್ರತಿಪಕ್ಷಗಳದು.
ರಾಜಪಕ್ಷೆ ಅವರ ಇಬ್ಬರು ಸಹೋದರರು ಮತ್ತು ಒಬ್ಬ ಮಗ ಕೂಡ ಈ ಸಂಸದೀಯ ಚುನಾವಣೆ ಕಣದಲ್ಲಿದ್ದಾರೆ. ಫಲಿತಾಂಶವು ಭಾರತೀಯ ಕಾಲಮಾನ ಪ್ರಕಾರ ಗುರುವಾರ ಮಧ್ಯರಾತ್ರಿಯೇ ದೊರೆಯಲಿದೆ.