ಓಹಿಯೋದಲ್ಲಿರುವ ಸಿಖ್ ಮಂದಿರವೊಂದರಲ್ಲಿ ಪೊಲೀಸರು ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಟ್ಟು ಕೊಂದಿದ್ದಾರೆ.
ಬೆಡ್‌ಫರ್ಡ್ ಓಹಿಯೋದ ರವೀಂದ್ರ ನಿಜ್ಜರ್ (41) ಎಂಬಾತ ಗುರು ಗೋವಿಂದ ಸಿಂಗ್ ಸಿಖ್ ಮಂದಿರದಲ್ಲಿ ಗುರುವಾರ ಪೊಲೀಸ್ ಗುಂಡಿಗೆ ಬಲಿಯಾಗಿದ್ದಾನೆ.
ಮೃತ ವ್ಯಕ್ತಿಯು ಮಂದಿರದೊಳಗೆಯೇ ಅರ್ಚಕರಿಬ್ಬರನ್ನು ಮಾಂಸ ಕತ್ತರಿಸುವ ಚಾಕು ಹಿಡಿದು ಅಟ್ಟಾಡಿಸಿಕೊಂಡು ಓಡುತ್ತಿದ್ದ. ಕತ್ತಿ ಝಳಪಿಸುತ್ತಾ ಓಡುತ್ತಿದ್ದ ನಿಜ್ಜರ್‌ನನ್ನು ಕಂಡು ಕತ್ತಿ ಎಸೆಯುವಂತೆ ಸೂಚಿಸಿದರೂ ಕೇಳದಾದಾಗ, ಪೊಲೀಸರು ಆತನತ್ತ ಗುಂಡು ಹಾರಿಸಿದರು ಎಂದು ಮೂಲಗಳು ತಿಳಿಸಿವೆ.
ಮಂದಿರ ಸಮಿತಿಯ ಸದಸ್ಯನೇ ಆಗಿದ್ದ ಮೃತ ವ್ಯಕ್ತಿಯ ಈ ವಿಚಿತ್ರ ವರ್ತನೆಗೆ ಕಾರಣಗಳು ತಿಳಿದುಬಂದಿಲ್ಲ. ಈ ಹಿಂದೆಯೂ ನಿಜ್ಜರ್ ವಿರುದ್ಧ ಜಗಳ, ವಿಚಿತ್ರ ವರ್ತನೆ ಇತ್ಯಾದಿಗಳಿಗೆ ಸಂಬಂಧಿಸಿ ಸಾಕಷ್ಟು ಕೇಸುಗಳು ದಾಖಲಾಗಿದ್ದವು. 18 ತಿಂಗಳು ಜೈಲುವಾಸವನ್ನೂ ಅನುಭವಿಸಿದ್ದು, ಆ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ತಪಾಸಣೆಗೆ ಸೂಚಿಸಲಾಗಿತ್ತು.