ನಕ್ಸಲ್ ಜತೆ ಮಾತುಕತೆ ನಡೆಸದಿದ್ದರೆ...!: ನೇಪಾಳದಿಂದ ಎಚ್ಚರಿಕೆ
ಕಾಠ್ಮಂಡು, ಶುಕ್ರವಾರ, 9 ಏಪ್ರಿಲ್ 2010( 12:46 IST )
ಮಾವೋವಾದಿ ಗೆರಿಲ್ಲಾಗಳೊಂದಿಗೆ ಮಾತುಕತೆ ಇಲ್ಲ ಎಂದು ಭಾರತದ ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದರೂ, ದಯವಿಟ್ಟು ಮಾತುಕತೆಗೆ ಮುಂದಾಗಿ ಎಂದು ಒತ್ತಾಯಿಸುತ್ತಿದ್ದಾರೆ ನೇಪಾಳದ ಮಾಜಿ ಮಾವೋವಾದಿ ಗೆರಿಲ್ಲಾಗಳು. ಇಲ್ಲವಾದಲ್ಲಿ 'ಭಾರೀ ಬೆಲೆ ತೆರಬೇಕಾದೀತು' ಎಂದೂ ಎಚ್ಚರಿಸಿದ್ದಾರೆ.
ಭಾರತವು ನೇಪಾಳದಿಂದ ಪಾಠ ಕಲಿಯಬೇಕು ಎಂದು ಮಾಜಿ ನಿಷೇಧಿತ ಯೂನಿಫೈಡ್ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್ (ಮಾವೋವಾದಿ)ಯ ವಕ್ತಾರ ದೀನಾನಾಥ್ ಶರ್ಮಾ ಹೇಳಿದ್ದಾರೆ. ಈ ಸಂಘಟನೆ ನಾಲ್ಕು ವರ್ಷದ ಹಿಂದೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿ ಇತಿಹಾಸ ಸೃಷ್ಟಿಸಿದ್ದು, ಚುನಾವಣೆಗಳಲ್ಲೂ ಪಾಲ್ಗೊಳ್ಳುತ್ತಿದೆ. 2008ರ ಸಂಸದೀಯ ಚುನಾವಣೆಗಳಲ್ಲಿ ಅದು ಅತಿದೊಡ್ಡ ಪಕ್ಷವಾಗಿಯೂ ಮೂಡಿಬಂದಿತ್ತು.
ನಮ್ಮ ಪಕ್ಷವು 10 ವರ್ಷ ಕಾಲ ಜನ ಯುದ್ಧ ಕೈಗೊಂಡಿತು. ಆದರೆ ಸಮಯದ ಅಗತ್ಯವನ್ನು ಮನಗಂಡು, ಅದು ರಾಜಕೀಯ ಪಕ್ಷಗಳೊಂದಿಗೆ ಮಾತುಕತೆಗೆ ಮುಂದಾಯಿತು ಎಂದು ಶರ್ಮಾ ಹೇಳಿದ್ದಾರೆ.
ಮಾವೋವಾದಿ ಪಕ್ಷಗಳ ವಿರುದ್ಧ ಈಗ ನಡೆಯುತ್ತಿರುವ ಕಾರ್ಯಾಚರಣೆಯು ಇಂದಿರಾಗಾಂಧಿ ಕಾಲದ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ ಎಂದಿರುವ ಅವರು, ಜನರ ಮಾತು ಕೇಳಲು ನಿರಾಕರಿಸುವ ಸರಕಾರವು ಸರ್ವಾಧಿಕಾರಿ ಧೋರಣೆ ತಳೆದು, ಜನರ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದಾದರೆ, ಜನರಿಂದ ತಕ್ಕ ಪ್ರತಿಕ್ರಿಯೆ ಬಂದೇ ಬರುತ್ತದೆ ಎಂದಿದ್ದಾರೆ.
ನೇಪಾಳದಲ್ಲಿ ಆದದ್ದೂ ಹಾಗೆಯೇ. ದೊರೆ ಜ್ಞಾನೇಂದ್ರ ಸರ್ವಾಧಿಕಾರಿಯಂತೆ ಆಡಳಿತ ಮಾಡಲು ಯತ್ನಿಸಿದರು. ಜನರ ಧ್ವನಿ ಹತ್ತಿಕ್ಕಲು ಯತ್ನಿಸಿದರೆ ಭಾರತ ಸರಕಾರಕ್ಕೆ ಅದು ತೀರಾ ದುಬಾರಿಯಾದೀತು ಎಂದು ಶರ್ಮಾ ಎಚ್ಚರಿಕೆ ನೀಡಿದರು.
ಭಾರತದ ಬುದ್ಧಿಜೀವಿಗಳು ಕೂಡ ಈಗ ಅಲ್ಲಿನ ಸರಕಾರದ ವಿರುದ್ಧ ಧ್ವನಿಯೆತ್ತಲಾರಂಭಿಸಿದ್ದಾರೆ ಎಂದ ಅವರು, 1996ರಲ್ಲಿ ಶಾಂತಿ ಮಾತುಕತೆಗೆ ನಾವು ಪ್ರಸ್ತಾಪ ಮುಂದಿಟ್ಟಿದ್ದೆವು. ಅಂದಿನ ಪ್ರಧಾನಿ ಶೇರ್ ಬಹಾದೂರ್ ದೇವುಬಾ ಕೇಳಲಿಲ್ಲ. ಆನಂತರ ನಾವು ಜನ ಯುದ್ಧ ಆರಂಭಿಸಬೇಕಾಯಿತು. ಸಾವಿರಾರು ಮಂದಿ ಸಾವನ್ನಪ್ಪಿದರು ಎಂದು ನೆನಪಿಸಿದರು.
ಭಾರತೀಯ ಕಮ್ಯುನಿಸ್ಟರಿಗೆ ನೇಪಾಳ ಮಾವೋವಾದಿಗಳ ಸಂಪರ್ಕ, ಸಂಬಂಧ ಇನ್ನೂ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಭಾರತದ ಅತಿದೊಡ್ಡ ಆಂತರಿಕ ಶತ್ರುಗಳು ಎಂದು ಕರೆಯಲ್ಪಡುವ ನಕ್ಸಲರೊಂದಿಗೆ ಮಾತುಕತೆ ನಡೆಸಬೇಕೆಂದು ನೇಪಾಳದ ಮಾವೋವಾದಿಗಳು ಒತ್ತಡ ಹೇರುತ್ತಿರುವುದು ಹುಬ್ಬೇರಿಸಲು ಕಾರಣವಾಗಿದೆ.