ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಂಸದೀಯ ಚುನಾವಣೆ; ರಾಜಪಕ್ಷೆ ಮೈತ್ರಿಕೂಟ ಜಯಭೇರಿ (Sri Lanka | Mahinda Rajapaksa | parliamentary election | Sarath Fonseka)
Bookmark and Share Feedback Print
 
ಯುದ್ಧಾನಂತರದ ಶ್ರೀಲಂಕಾ ಮೊದಲ ಸಂಸದೀಯ ಚುನಾವಣೆಯಲ್ಲಿ ಅಧ್ಯಕ್ಷ ಮಹೀಂದ್ರಾ ರಾಜಪಕ್ಷೆಯವರ ಆಡಳಿತ ಮೈತ್ರಿಕೂಟವು ಭರ್ಜರಿ ಜಯಗಳಿಸಿದೆ ಎಂದು ಶ್ರೀಲಂಕಾ ಚುನಾವಣಾ ಇಲಾಖೆಯು ತಿಳಿಸಿದೆ.

ರಾಜಪಕ್ಷೆಯವರ ಯುನೈಟೆಡ್ ಪ್ಯೂಪಲ್ಸ್ ಫ್ರೀಡಮ್ ಮೈತ್ರಿಕೂಟವು ಸ್ಪರ್ಧಿಸಿದ್ದ 225 ಸ್ಥಾನಗಳಲ್ಲಿ 117ನ್ನು ಗೆದ್ದುಕೊಂಡಿದೆ ಎಂದು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಶ್ರೀಲಂಕಾ ಸರಕಾರ ರಚಿಸಲು 113 ಸ್ಥಾನಗಳನ್ನು ಗಳಿಸಬೇಕು. ಸರಳ ಬಹುಮತ ಪಡೆದಿರುವ ರಾಜಪಕ್ಷೆಯವರ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದಿದ್ದು, ನಿಕಟ ಎದುರಾಳಿ ಯುನೈಟೆಡ್ ನ್ಯಾಷನಲ್ ಫ್ರಂಟ್ ಕೇವಲ 46 ಸ್ಥಾನಗಳಲ್ಲಷ್ಟೇ ಜಯಗಳಿಸಿದೆ.

ಪ್ರಸಕ್ತ ಸೇನೆಯ ವಶದಲ್ಲಿರುವ ಪರಾಜಿತ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಮಿಲಿಟರಿ ಮಾಜಿ ಮುಖ್ಯಸ್ಥ ಜನರಲ್ ಸರತ್ ಫೊನ್ಸೇಕಾ ಅವರ ನಾಯಕತ್ವದ ಮತ್ತೊಂದು ವಿರೋಧ ಪಕ್ಷ ಕೇವಲ ಐದು ಸ್ಥಾನಗಳನ್ನಷ್ಟೇ ಗೆದ್ದಿದೆ. ತಮಿಳು ಪಕ್ಷವು ತನ್ನ ಪ್ರಾಬಲ್ಯ ಹೊಂದಿರುವ ಈಶಾನ್ಯ ಪ್ರದೇಶದಲ್ಲಿ 12 ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದೆ.

ಗುರುವಾರ ನಡೆದಿದ್ದ ಚುನಾವಣೆಯ ಫಲಿತಾಂಶ ಇದುವರೆಗೆ ಪ್ರಕಟಗೊಂಡಿರುವುದು ಕೇವಲ 180 ಕ್ಷೇತ್ರಗಳದ್ದು ಮಾತ್ರ. ಉಳಿದ 16 ಸ್ಥಾನಗಳ ಫಲಿತಾಂಶಗಳನ್ನು ಚುನಾವಣಾ ಆಯೋಗವು ಅಮಾನತುಗೊಳಿಸಿದ್ದು, ಮರು ಚುನಾವಣೆಗೆ ಆದೇಶ ನೀಡಿದೆ.

ಎರಡು ಜಿಲ್ಲೆಗಳ 38 ಮತದಾನ ಕೇಂದ್ರಗಳಲ್ಲಿ ಮರು ಮತದಾನ ನಡೆಯಲಿದ್ದು, ಚುನಾವಣೆ ದಿನಾಂಕವನ್ನು ಇನ್ನೂ ಪ್ರಕಟಿಸಲಾಗಿಲ್ಲ. ಉಳಿದ 29 ಸ್ಥಾನಗಳನ್ನು ಪ್ರತಿ ಪಕ್ಷಗಳು ಗಳಿಸುವ ಮತದ ಆಧಾರದಲ್ಲಿ ಎಲ್ಲಾ ಪಕ್ಷಗಳಿಗೂ ಹಂಚಲಾಗುತ್ತದೆ.

ಈ ಫಲಿತಾಂಶದೊಂದಿಗೆ ರಾಜಪಕ್ಷೆಯವರು ರಾಜಕೀಯವಾಗಿ ಪ್ರಸಕ್ತ ಪ್ರಭಾವಿಯಾಗಿರುವುದು ಕಂಡು ಬಂದಿದ್ದರೂ, ಸಂವಿಧಾನ ತಿದ್ದುಪಡಿಗೆ ಅಗತ್ಯವಿರುವ ಮೂರನೇ ಎರಡು ಭಾಗದಷ್ಟು ಬಹುಮತ ಪಡೆಯಲಿದ್ದಾರೆಯೇ ಎಂಬುದು ಇನ್ನು ಕೂಡ ಸ್ಪಷ್ಟವಾಗಿಲ್ಲ. ಉಳಿದ 16 ಸ್ಥಾನಗಳ ಫಲಿತಾಂಶಗಳು ಬಂದ ನಂತರವಷ್ಟೇ ಎಲ್ಲವೂ ಸ್ಪಷ್ಟವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ