ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಆತಿಥ್ಯ ವಹಿಸಿರುವ ಪರಮಾಣು ಭಧ್ರತೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಪಾಕ್ ಪ್ರಧಾನಿ ಗಿಲಾನಿ, ದೇಶದ ಅಣ್ವಸ್ತ್ರ ಘಟಕಗಳು ಸುರಕ್ಷಿತವಾಗಿವೆ ಎಂದು ವಿಶ್ವ ಸಮುದಾಯಕ್ಕೆ ಭರವಸೆ ನೀಡಿದರು.
ಪಾಕಿಸ್ತಾನದ ಅಣ್ವಸ್ತ್ರ ಘಟಕಗಳು ಸುರಕ್ಷಿತವಾಗಿವೆ ಎಂದು ದೇಶದ ಜನತೆಗೆ ಹಾಗೂ ವಿಶ್ವ ಸಮುದಾಯಕ್ಕೆ ಭರವಸೆ ನೀಡುತ್ತೇನೆ ಎಂದು ರಾವಲ್ಪಿಂಡಿಯಲ್ಲಿರುವ ಸೇನಾ ನೆಲೆಯಲ್ಲಿ ಪ್ರಧಾನಿ ಗಿಲಾನಿ ತಿಳಿಸಿದ್ದಾರೆ.
ವಿಶ್ವ ಸಮುದಾಯ ಪಾಕ್ ಅಣ್ವಸ್ತ್ರ ಘಟಕಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ವರದಿಗಳಿಗೆ ಸ್ಪಂದಿಸಿದ ಪ್ರಧಾನಿ ಗಿಲಾನಿ, ಸುಮಾರು 30 ವರ್ಷಗಳಿಂದ ಅಣ್ವಸ್ತ್ರಗಳ ಸುರಕ್ಷತೆಯನ್ನು ಕಾಪಾಡಿಕೊಂಡು ಬಂದಿರುವ ಅನುಭವವಿದ್ದು, ಅನುಭವಿಗಳಿಗೆ ಅಣ್ವಸ್ತ್ರಘಟಕಗಳ ಸುರಕ್ಷತೆಯ ಹೊಣೆಯನ್ನು ವಹಿಸಲಾಗಿದೆ ಎಂದರು.
ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಶೃಂಗಸಭೆಯಲ್ಲಿ ಭೇಟಿ ಮಾಡುವಿರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಿಲಾನಿ, ಭೇಟಿಯ ಕುರಿತಂತೆ ಇಲ್ಲಿಯವರೆಗೆ ಸಮಯ ನಿಗದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಅಮೆರಿಕೆಗೆ ತೆರಳುತ್ತಿರುವ ನಿಯೋಗದಲ್ಲಿ, ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಸೇರಿದಂತೆ ಇತರ ನಾಯಕರು ಅಮೆರಿಕದಲ್ಲಿ ನಡೆಯಲಿರುವ ಪರಮಾಣು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.