ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವ ಪಾಕಿಸ್ತಾನದ ಇಚ್ಛಾಶಕ್ತಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಬೆನ್ನಿಗೇ, ಹಂತಕರ ವಿರುದ್ಧ ಏನಾದರೂ ಕ್ರಮ ಕೈಗೊಳ್ಳುವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಪಾಕಿಸ್ತಾನಕ್ಕೆ ಸೂಚಿಸಿದ್ದಾರೆ. ಆದರೆ ಎಂದಿನಂತೆಯೇ ಪಾಕಿಸ್ತಾನವು ಈ ಕಿವಿಯಲ್ಲಿ ಕೇಳಿಸಿಕೊಂಡು, ಆ ಕಿವಿಯಲ್ಲಿ ಹೊರಗೆ ಬಿಡುವ ಸಾಧ್ಯತೆಗಳೇ ಹೆಚ್ಚು.
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ಜೊತೆಗೆ ಮಾತನಾಡಿದ ಒಬಾಮ, ಇಸ್ಲಾಮಾಬಾದ್ ಜೊತೆ ಮೈತ್ರಿ ಮುಂದುವರಿಸುವ ಬಗ್ಗೆ ಭಾರತೀಯ ಪ್ರಧಾನಿ ಪ್ರಾಮಾಣಿಕರಾಗಿದ್ದಾರೆ. ಆದರೆ ಪಾಕಿಸ್ತಾನವು ಮುಂಬೈ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಯಸುತ್ತಿದ್ದಾರೆ ಎಂದು ತಿಳಿಸಿದರು.
ರಾಜತಾಂತ್ರಿಕ ಮೂಲಗಳ ಪ್ರಕಾರ, ಮುಂಬೈ ದಾಳಿಕೋರರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಂಡರೆ ಅದೊಂದು ಧನಾತ್ಮಕ ಸಂಗತಿಯಾಗಬಹುದೆಂದು ಒಬಾಮ ಅವರು ಕೂಡ ಮಾತುಕತೆ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಕಾಲೇಜು ದಿನಗಳಿಂದಲೂ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರಿಂದಾಗಿ ತನಗೆ ಪಾಕ್ ಬಗ್ಗೆ ಹೆಚ್ಚಿನ ಒಲವು ಎಂದು ಒಬಾಮ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಮುಂಬೈ ದಾಳಿ ನಡೆದು ವರ್ಷ ಕಳೆದರೂ ಪಾಕಿಸ್ತಾನಕ್ಕೆ ಕ್ರಮ ಕೈಗೊಳ್ಳುವಂತೆ ಮಾಡಿಸುವಲ್ಲಿ ಭಾರತ ಮತ್ತು ಅಮೆರಿಕವು ಕೂಡ ವಿಫಲವಾಗಿರುವುದು ಈ ಮಾತುಗಳಿಂದ ಸ್ಪಷ್ಟವಾಗುತ್ತಿದೆ.