ಪಾಕಿಸ್ತಾನದ ಧೃತಿಗೆಡಿಸಲು ಭಾರತವು "ಜಲ ಭಯೋತ್ಪಾದನೆ" ಮಾಡುತ್ತಿದೆ ಎಂದು ಲಷ್ಕರ್ ಇ ತೋಯಿಬಾದ ಸಂಸ್ಥಾಪಕ ಮತ್ತು ಮುಖ್ಯಸ್ಥ, ಕುಖ್ಯಾತ ಉಗ್ರಗಾಮಿ ಹಫೀಜ್ ಮುಹಮ್ಮದ್ ಸಯೀದ್ ಆರೋಪಿಸಿದ್ದಾನಲ್ಲದೆ, ಇದು ಉಭಯ ರಾಷ್ಟ್ರಗಳ ನಡುವೆ ಭವಿಷ್ಯದ ಯುದ್ಧಕ್ಕೂ ಕಾರಣವಾಗುತ್ತದೆ ಎಂದೂ ಹೇಳಿದ್ದಾನೆ.
ಅಣೆಕಟ್ಟುಗಳು ಮತ್ತು ಕಾಲುವೆಗಳನ್ನು ನಿರ್ಮಿಸುವ ಮೂಲಕ ಭಾರತದ ಜಮ್ಮು ಮತ್ತು ಕಾಶ್ಮೀರದಿಂದ ಪಾಕಿಸ್ತಾನಕ್ಕೆ ಹರಿಯುತ್ತಿರುವ ನದಿಗಳ ಪಥ ಬದಲಾಯಿಸಲು ಭಾರತ ಪ್ರಯತ್ನಿಸುತ್ತಿದೆ ಎಂದಿರುವ ಆತ, ಪಾಕಿಸ್ತಾನಕ್ಕೆ ನೀರಿನ ಪೂರೈಕೆಯನ್ನು ತಡೆಯುವುದು ಮತ್ತು ಈ ಮೂಲಕ ದೇಶದಲ್ಲಿ ಜಲಕ್ಷಾಮ ಆಗುವಂತೆ ನೋಡಿಕೊಳ್ಳುವುದು ಈ ಕ್ರಮದ ಹಿಂದಿನ ಉದ್ದೇಶ ಎಂದು ಹೇಳಿದ್ದಾನೆ.
2008ರ ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯ ನಂತರ ಹಫೀಜ್ ಸಯೀದ್ ತಲೆಮರೆಸಿಕೊಂಡಿದ್ದೇ, ಲಷ್ಕರ್ ಕಾರ್ಯಾಚರಣೆಯನ್ನು ನಿಯಂತ್ರಿಸುತ್ತಿದ್ದಾನೆ. ಭಾರತದ ವಿರುದ್ಧ ಹೋರಾಡುವಂತೆ ಆತ ಪಾಕಿಸ್ತಾನೀಯರಿಗೆ ಕರೆ ನೀಡಿದ್ದು, ಭಾರತ ನಿರ್ಮಿಸುತ್ತಿರುವ ಅಣೆಕಟ್ಟುಗಳ ವಿರುದ್ಧ ಪ್ರತಿಭಟಿಸುವಂತೆಯೂ ಆಗ್ರಹಿಸಿದ್ದಾನೆ.