ಚೀನಾದ ವಾಯುವ್ಯ ಭಾಗದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು ಕನಿಷ್ಟ 300 ಮಂದಿ ಸಾವನ್ನಪ್ಪಿದ್ದು, 8,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಭೂಕಂಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 6.9ರಷ್ಟು ತೀವ್ರತೆಯನ್ನು ಕೂಡಿದ್ದು, ಬೆಳಗ್ಗೆ ಸುಮಾರು 7.49ರ ಸುಮಾರಿಗೆ ಸಂಭವಿಸಿದೆ. ಸಾವಿರಾರು ಮನೆಗಳು ನಾಶಗೊಂಡು ಕಟ್ಟಡಗಳು ಬುಡಮೇಲಾಗಿವೆ. ರಸ್ತೆಗಳಿಗೂ ಅಪಾರ ಹಾನಿಯಾಗಿದ್ದು, ಪರ್ವತಗಳ ಕುಸಿತದಿಂದಾಗಿ ರಸ್ತೆ ಸಂಪರ್ಕವೇ ಕಡಿದುಹೊಗಿದೆ.
ಟಿಬೆಟ್ ಗಡಿ ಭಾಗದ ಕ್ವಿಂಗ್‌ಹೈ ಪಟ್ಟಣದಲ್ಲಿ ಈ ಅನಾಹುತ ಸಂಭವಿಸಿದ್ದು, ಈ ಪ್ರದೇಶ ಬಹುತೇಕ ಪರ್ವತಗಳಿಂದ ಆವೃತವಾಗಿದೆ. ಅಧಿಕಾರಿಗಳ ಒಂದು ಅಂದಾಜಿನ ಪ್ರಕಾರ ಕನಿಷ್ಟ 300 ಮಂದಿ ಈ ಅವಘಡದಲ್ಲಿ ಹತರಾಗಿದ್ದು, 8,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಗಾಯಾಳುಗಳೇ ಕಾಣಿಸುತ್ತಿದ್ದು, ಲೆಕ್ಕ ಹಾಕಲು ಸಾಧ್ಯವಿಲ್ಲದಷ್ಟು ಸಂಖ್ಯೆಯಲ್ಲಿ ಗಾಯಾಳುಗಳ ರೋದನ ಮುಗಿಲು ಮುಟ್ಟಿದೆ. ಹಲವಾರು ಶಾಲೆಗಳು ನೆಲದಲ್ಲಿ ಹುದುಗಿ ಹೋಗಿವೆ. ಸರ್ಕಾರ ಸಭೆಗಳು ನಡೆಯುತ್ತಿದ್ದ ಯುಶು ಹೋಟೇಲಿನ ಕಟ್ಟಡವೂ ಕುಸಿದು ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿವೆ.
ಸೈನಿಕರು ಈಗಾಗಲೇ ಭೂಕಂಪ ಪೀಡಿತ ಸ್ಥಳದಲ್ಲಿ ರಕ್ಷಮಾ ಕಾರ್ಯಕ್ಕೆ ಧುಮುಕಿದ್ದು, ಪ್ರಾಥಮಿಕ ವೈದ್ಯಕೀಯ ನೆರವನ್ನು ನೀಡಲಾಗುತ್ತಿದೆ. ಅವಶೇಷಗಳಡಿಯಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯವೂ ಭರದಿಂದ ಸಾಗುತ್ತಿದೆ. ಹಾಗಾಗಿ ಸಾಕಷ್ಟು ಮಂದಿ ಇನ್ನೂ ಸಿಲುಕಿರುವ ಶಂಕೆಯಿದ್ದು, ಸಾವುನೋವಿನ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗುವ ಸಂಭವವಿದೆ ಎನ್ನಲಾಗಿದೆ.