ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಿ- ಅಮೆರಿಕನ್ ಉಗ್ರ ಡೇವಿಡ್ ಹೆಡ್ಲಿ ಕುರಿತ ವಿಚಾರಣೆ ನಡೆಸಲು ಭಾರತಕ್ಕೆ ಅವಕಾಶ ನೀಡುವ ಸಂಬಂಧ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹಸಿರು ನಿಶಾನೆ ತೋರಿದ್ದಾರೆಂದು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಒಬಾಮಾ ಅವರ ಭೇಟಿಯ ಸಂದರ್ಭ ನಾನು ಒಬಾಮಾ ಜೊತೆ ಈ ವಿಚಾರವಾಗಿ ಚರ್ಚಿಸಿದೆ. ಸದ್ಯದ ಕಾನೂನು ಪರಿಸ್ಥಿತಿಯ ಬಗ್ಗೆ ಒಬಾಮಾ ತಮಗೆ ಅರಿವಿದೆ ಎಂದು ಹೇಳಿದ್ದಲ್ಲದೆ, ಹೆಡ್ಲಿಯ ವಿಚಾರಣೆ ಸಂಬಂಧ ಭಾರತಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಅವರು ನನ್ನಲ್ಲಿ ತಿಳಿಸಿದರು ಎಂದು ಸಿಂಗ್ ನುಡಿದರು.
ಮುಂಬೈ ದಾಳಿಯ ಕುರಿತು ಅಮೆರಿಕದ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡಿದ್ದ ಹೆಡ್ಲಿಯನ್ನು ಭಾರತ ವಿಚಾರಣೆ ಸಂಬಂಧ ಕಳುಹಿಸಿಕೊಡಲು ಹಲವು ಬಾರಿ ಅಮೆರಿಕಕ್ಕೆ ಕೋರಿತ್ತು. ಈ ಬಾರಿಯೂ ಮತ್ತೆ ಪ್ರಧಾನಿ ಈ ವಿಚಾರವ್ನನು ನೇರವಾಗಿ ಒಬಾಮಾ ಜೊತೆಗೆ ಮಾತುಕತೆ ಸಂದರ್ಭ ಎತ್ತಿದ್ದರು.
ಈಗ ಒಬಾಮಾ ನೇರವಾಗಿ ಹೇಳಿರುವುದರಿಂದ ಈ ಬಗ್ಗೆ ಮತ್ತೆ ಭಾರತದ ಪ್ರಯತ್ನ ಫಲಿಸಿದಂತಾಗಿದೆ. ಆದರೆ ಹೆಡ್ಲಿಯ ನೇರ ವಿಚಾರಣೆ ಅಂದರೆ ಕೇವಲ ವಿಡಿಯೋ ಕಾನ್ಫರೆನ್ಸ್ ಆಗಿರುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ.
ಪಾಕಿಸ್ತಾನವೂ ಈಗಾಗಲೇ 26/11ರ ಮುಂಬೈ ದಾಳಿಗೆ ಸಂಬಂಧಿಸಿ ಏಳು ಉಗ್ರರ ವಿಚಾರಣೆ ನಡೆಸುತ್ತಿದೆ.