ಮೆಕ್ಕಾದಲ್ಲಿ ತೆರೆದುಕೊಳ್ಳಲಿದೆ ವಿಶ್ವದ 2ನೇ ಅತೀ ಎತ್ತರದ ಕಟ್ಟಡ
ದುಬೈ, ಬುಧವಾರ, 14 ಏಪ್ರಿಲ್ 2010( 18:30 IST )
ಇಲ್ಲಿನ ಬುರ್ಜ್ ಖಲೀಫಾ ವಿಶ್ವದ ಅತೀ ಎತ್ತರದ ಕಟ್ಟಡ ಎಂಬುದು ತಿಳಿದಿದೆಯಲ್ಲವೇ? ಇದೀಗ ಅದಕ್ಕಿಂತ 11 ಮೀಟರ್ ಕಿರಿದಾಗಿರುವ, ವಿಶ್ವದ ಎರಡನೇ ಅತೀ ಎತ್ತರದ ಕಟ್ಟಡವೊಂದು ಬೃಹತ್ ಗಡಿಯಾರದೊಂದಿಗೆ ಮೆಕ್ಕಾದಲ್ಲಿ ಇದೇ ವರ್ಷದ ಜುಲೈ ತಿಂಗಳಲ್ಲಿ ಪೂರ್ಣವಾಗಿ ಅನಾವರಣಗೊಳ್ಳಲಿದೆ.
ಈ ವಿಶೇಷ ಕಟ್ಟಡದ ಹೆಸರು ಮೆಕ್ಕಾ ರಾಯಲ್ ಕ್ಲಾಕ್ ಟವರ್. ಸೌದಿ ಅರೇಬಿಯಾದಲ್ಲಿ ನಿರ್ಮಾಣ ಹಂತದಲ್ಲಿರುವ ಈ ಹೋಟೆಲ್ ಸಂಕೀರ್ಣದಲ್ಲಿ, ಲಂಡನ್‌ನ ವಿಶ್ವವಿಖ್ಯಾತವಾದ 'ಬಿಗ್ ಬೆನ್'ಗಿಂತ ಆರು ಪಟ್ಟು ದೊಡ್ಡದಾಗಿರುವ ಗಡಿಯಾರ ಇರುತ್ತದೆ ಎಂದು ಇದರ ಪ್ರಧಾನ ವ್ಯವಸ್ಥಾಪಕ ಮೊಹಮದ್ ಅಲ್-ಅರ್ಕುಬಿ ಬುಧವಾರ ತಿಳಿಸಿದ್ದಾರೆ.
ಈ ಕಟ್ಟಡದಲ್ಲಿ 662 ಮೀಟರ್ ಕಾಂಕ್ರೀಟ್ ನಿರ್ಮಾಣವಿದ್ದು, ಅದರ ಮೇಲೆ 155 ಮೀಟರ್‌ನ ಅರ್ಧಚಂದ್ರಾಕೃತಿಯ ಲೋಹದ ಮಿನಾರ್ ಇರುತ್ತದೆ. ಇದು ಎರಡೂ ಸೇರಿದರೆ ಈ ಕಟ್ಟಡದ ಒಟ್ಟು ಎತ್ತರವು, ವಿಶ್ವದ ಅತಿದೊಡ್ಡ ಕಟ್ಟಡ ಬುರ್ಜ್ ಖಲೀಫಾ ಇರುವ 828 ಮೀಟರ್ ಎತ್ತರಕ್ಕಿಂತ 11 ಮೀಟರ್ ಕಡಿಮೆ ಅಷ್ಟೆ.
ಸದ್ಯಕ್ಕೆ ವಿಶ್ವದಲ್ಲಿ ಎರಡನೇ ಅತೀ ಎತ್ತರದ ಕಟ್ಟಡ ಎಂಬ ಖ್ಯಾತಿ ತೈವಾನ್‌ನಲ್ಲಿರುವ ತೈಪೈ-101 ಹೆಸರಿನಲ್ಲಿದೆ. ಈಗ ಮೆಕ್ಕಾ ರಾಯಲ್ ಕ್ಲಾಕ್ ಟವರ್‌ನ ಬರೇ ಕಾಂಕ್ರೀಟ್ ನಿರ್ಮಾಣದ ಎತ್ತರವೇ ತೈಪೈ-101ದ 508 ಮೀಟರಿಗಿಂತ ಹೆಚ್ಚು ಎತ್ತರವಿದೆ.
ಈ ಹೋಟೆಲ್‌ನ ಮೊದಲ ಭಾಗವು ಜೂನ್ ತಿಂಗಳಲ್ಲಿ ಆರಂಭವಾಗಲಿದ್ದರೆ, ಗಡಿಯಾರವು ಜುಲೈ ತಿಂಗಳಿಂದ ಕಾರ್ಯಾರಂಭಿಸಲಿದೆ ಎಂದು ಅರ್ಕುಬಿ ತಿಳಿಸಿದ್ದಾರೆ.