ನಾಲ್ಕು ವರ್ಷದೊಳಗೆ ಅಣ್ವಸ್ತ್ರ ಸುರಕ್ಷೆ: ವಿಶ್ವನಾಯಕರ ಭರವಸೆ
ಪರಮಾಣು ಶಸ್ತ್ರಾಸ್ತ್ರ ಉಗ್ರರ ಕೈಗೆಟುಕದಂತೆ ಸೂಕ್ತ ವ್ಯವಸ್ಥೆಗೆ ಶೃಂಗ ಸಭೆ ಸಮ್ಮತಿ
ವಾಷಿಂಗ್ಟನ್, ಬುಧವಾರ, 14 ಏಪ್ರಿಲ್ 2010( 18:33 IST )
ಅಣ್ವಸ್ತ್ರಗಳು ಉಗ್ರಗಾಮಿಗಳ ಕೈಗೆಟುಕದಂತೆ ಸುರಕ್ಷತಾ ಕ್ರಮಗಳನ್ನು ನಾಲ್ಕು ವರ್ಷಗಳೊಳಗೆ ಅಳವಡಿಸುವುದಾಗಿ 47 ಪರಮಾಣು ರಾಷ್ಟ್ರಗಳ ಶೃಂಗ ಸಭೆಯು ಮಂಗಳವಾರ ಗಡುವಿನ ಸಹಿತ ಸಮ್ಮತಿಸುವುದರೊಂದಿಗೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ವಿಶ್ವವು ಸುರಕ್ಷಿತವಾಗಲಿದೆ ಎಂದು ಘೋಷಿಸಿದರು.
ವಾಷಿಂಗ್ಟನ್‌ನಲ್ಲಿ ಶೃಂಗ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಒಬಾಮ, ನಾವು ಕೈಗೊಂಡಿರುವ ಕ್ರಮಗಳಿಂದಾಗಿ ಅಮೆರಿಕದ ಜನತೆ ಸುರಕ್ಷಿತವಾಗಿರುತ್ತಾರೆ ಮತ್ತು ವಿಶ್ವವು ಕೂಡ ಮತ್ತಷ್ಟು ಭದ್ರವಾಗಿರುತ್ತದೆ ಎಂದು ಹೇಳಿದರು.
ಉಗ್ರರ ಕೈಗೆ ಅಣ್ವಸ್ತ್ರ ಲಭಿಸಿದರೆ ಏನು ಮಾಡುವುದು ಎಂದು ಭಾರತೀಯ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಸೋಮವಾರ ನೆರೆ ರಾಷ್ಟ್ರ ಪಾಕಿಸ್ತಾನವನ್ನು ಹೆಸರಿಸದೆಯೇ ಆತಂಕ ವ್ಯಕ್ತಪಡಿಸಿದ್ದರು. ಅದೇ ರೀತಿ, ಇತರ ರಾಷ್ಟ್ರಗಳ ನೇತಾರರು ಕೂಡ ಈ ವಿದಳನಾ ವಸ್ತುವಿನ ಭದ್ರತೆ ಬಗ್ಗೆ ವಹಿಸಲಾಗುತ್ತಿರುವ ನಿರ್ಲಕ್ಷ್ಯದ ಕುರಿತು ಹಾಗೂ ಅಣ್ವಸ್ತ್ರ-ಶಕ್ತ ಉಗ್ರಗಾಮಿ ಸಂಘಟನೆಗಳು ಜಗತ್ಪ್ರಳಯವನ್ನೇ ಉಂಟುಮಾಡಬಲ್ಲವು ಎಂದು ಕಳವಳ ವ್ಯಕ್ತಪಡಿಸಿದ್ದರು. ಇದೀಗ ಒಬಾಮ ಹೇಳಿಕೆಯನ್ನು ಎಲ್ಲ ರಾಷ್ಟ್ರಗಳೂ ಬೆಂಬಲಿಸಿವೆ.
ಆರು ದಶಕಗಳಲ್ಲೇ ಅತೀ ದೊಡ್ಡ ಶೃಂಗ ಸಭೆಯ ಆತಿಥ್ಯ ವಹಿಸಿದ್ದ ಅಮೆರಿಕ ಅಧ್ಯಕ್ಷ ಒಬಾಮ, ವಿವಾದಾತ್ಮಕ ಅಣ್ವಸ್ತ್ರ ಕಾರ್ಯಕ್ರಮ ಕೈಗೊಂಡಿರುವ ಇರಾನ್ ವಿರುದ್ಧ ವಿಶ್ವಸಂಸ್ಥೆಯ ಪ್ರಬಲ ನಿರ್ಬಂಧವನ್ನು ಬೆಂಬಲಿಸುವಂತೆ ಚೀನಾ ಮತ್ತು ಇತರ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರಗಳನ್ನು ಆಗ್ರಹಿಸಿದರು.