ಭುಟ್ಟೋಗೆ ರಕ್ಷಣೆ ಒದಗಿಸುವಲ್ಲಿ ಮುಶ್ ವಿಫಲ: ವಿಶ್ವಸಂಸ್ಥೆ
ವಿಶ್ವಸಂಸ್ಥೆ, ಶುಕ್ರವಾರ, 16 ಏಪ್ರಿಲ್ 2010( 15:37 IST )
2007ರಲ್ಲಿ ಹತ್ಯೆಗೀಡಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಬೆನೆಜಿರ್ ಭುಟ್ಟೋ ಅವರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಮಿಲಿಟರಿ ಸರ್ವಾಧಿಕಾರಿ ಪರ್ವೇಜ್ ಮುಶರಫ್ ಆಡಳಿತವು ಪೂರ್ಣವಾಗಿ ವಿಫಲಗೊಂಡಿತ್ತು ಎಂದು ಸ್ವತಂತ್ರ ವಿಚಾರಣೆ ಕೈಗೊಂಡಿದ್ದ ವಿಶ್ವಸಂಸ್ಥೆಯ ತನಿಖಾ ಸಮಿತಿಯು ಸಲ್ಲಿಸಿದ ಅಂತಿಮ ವರದಿಯಲ್ಲಿ ತಿಳಿಸಿದೆ.
ಸಮಿತಿಯು ತನಿಖೆಯ ಅಂತಿಮ ವರದಿಯನ್ನು ಸಲ್ಲಿಸಿದ್ದು, ಇದರಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮತ್ತು ಪೊಲೀಸ್ ಇಲಾಖೆಯನ್ನು ತೀವ್ರವಾಗಿ ಟೀಕಿಸಲಾಗಿದೆ. ಪಾಕಿಸ್ತಾನದ ಈ ಎರಡೂ ಭದ್ರತಾ ವಿಭಾಗಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.
ಭುಟ್ಟೋ ಹತ್ಯೆಯನ್ನು ತಡೆಯಬಹುದಿತ್ತು ಎಂದು ಚಿಲಿಯ ವಿಶ್ವಸಂಸ್ಥೆ ರಾಯಭಾರಿ ಹೇರಾಲ್ಡ್ ಮನಾಜ್ ನೇತೃತ್ವ ವಹಿಸಿದ್ದ ಮೂರು ಮಂದಿಯ ತನಿಖಾ ಸಮಿತಿಯು ತನ್ನ 65 ಪುಟಗಳ ವರದಿಯಲ್ಲಿ ವಿವರಣೆ ನೀಡಿದೆ.
ಭುಟ್ಟೋರಿಗೆ ಭಾರೀ ಬೆದರಿಕೆಗಳು ಇದ್ದಿದ್ದರ ಹೊರತಾಗಿಯೂ ರಕ್ಷಣೆಗಾಗಿ ಮುಶರಫ್ ಅವರ ಆಡಳಿತವು ಸೂಕ್ತ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ವರದಿ ಹೇಳಿದೆ.
ಅದೇ ವೇಳೆ ವರದಿಯು ಭುಟ್ಟೋ ಹತ್ಯೆ ಮಾಡಿದವರ ಹೆಸರನ್ನು ಬಹಿರಂಗಪಡಿಸಿಲ್ಲ.