ಮುಂಬೈನಲ್ಲಿ ದಾಳಿ ನಡೆಸಿದ ಉಗ್ರರು ಅಫ್ಘಾನಿಸ್ತಾನದಲ್ಲಿರುವ ಅಲ್‌ಕೈದಾ ಶಿಬಿರಗಳಲ್ಲಿ ತರಬೇತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಅಫ್ಘಾನಿಸ್ತಾನದ ಮಧ್ಯೆ ಉತ್ತಮ ಸಂಬಂಧಗಳಿದ್ದು, ಪಾಕಿಸ್ತಾನ ಮೂಲದ ಉಗ್ರರು ಅಫ್ಘನ್‌ನಲ್ಲಿ ತರಬೇತಿ ಪಡೆದಿದ್ದಾರೆ ಎನ್ನುವ ವರದಿಗಳು ತೀವ್ರ ಆತಂಕ ಮೂಡಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ವಿದೇಶಿಯರು ಸೇರಿದಂತೆ 166 ಮಂದಿ ಸಾವನ್ನಪ್ಪಿದ್ದರು.ಉಗ್ರರು ಅಫ್ಘಾನಿಸ್ತಾನದ ಅಲ್‌ಕೈದಾ ಶಿಬಿರಗಳಲ್ಲಿ ತರಬೇತಿ ಪಡೆದಿರುವುದು, ಉಭಯ ದೇಶಗಳ ಮಧ್ಯೆ ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ದಾಳಿಗೆ ಪಾಕಿಸ್ತಾನ ಮೂಲದ ಲಷ್ಕರ್-ಎ.ತೊಯಿಬಾ ಉಗ್ರಗಾಮಿ ಸಂಘಟನೆ ಕಾರಣವಾಗಿದ್ದು, ಸಂಘಟನೆಯ ಮುಖ್ಯಸ್ಥ ಹಫೀಜ್ ಸಯ್ಯಿದ್ ಅವರನ್ನು ಬಂಧಿಸುವಂತೆ ಭಾರತ, ಪಾಕಿಸ್ತಾನ ಸರಕಾರವನ್ನು ಒತ್ತಾಯಿಸಿತ್ತು.
ಒಂದು ವೇಳೆ ತಾಲಿಬಾನಿಗಳು ಅಫ್ಘಾನಿಸ್ತಾವನ್ನು ಮರುವಶಪಡಿಸಿಕೊಂಡಲ್ಲಿ, ಸ್ಥಿತಿ ವಿಕೋಪಕ್ಕೆ ತೆರಳಲಿದ್ದು, ಭಾರತಕ್ಕೆ ಕೂಡಾ ಬಿಕ್ಕಟ್ಟು ಎದುರಾಗಲಿದೆ ಎಂದು ಮೂಲಗಳು ತಿಳಿಸಿವೆ.