ಭಾರತ ದಾಳಿಗೆ ಉಗ್ರ ಸಂಚು: ಅಮೆರಿಕಾ ಪ್ರಜೆಗಳಿಗೆ ಎಚ್ಚರಿಕೆ
ವಾಷಿಂಗ್ಟನ್, ಶನಿವಾರ, 17 ಏಪ್ರಿಲ್ 2010( 13:22 IST )
ಭಾರತದ ಮೇಲೆ ಭಯೋತ್ಪಾದನಾ ದಾಳಿಗಳನ್ನು ನಡೆಸಲು ಉಗ್ರಗಾಮಿ ಸಂಘಟನೆಗಳು ಸಂಚು ಮಾಡುತ್ತಿರುವ ಸಾಧ್ಯತೆಗಳಿವೆ ಎಂದಿರುವ ಅಮೆರಿಕಾವು ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದು, ಭಾರತ ಪ್ರವಾಸ ಮಾಡುವ ಸಂದರ್ಭದಲ್ಲಿ ಜಾಗರೂಕತೆಯಿಂದಿರಬೇಕು ಎಂದು ಹೇಳಿದೆ.
ಭಾರತದ ಮೇಲೆ ದಾಳಿಗಳನ್ನು ನಡೆಸಲು ಉಗ್ರರು ನಿರಂತರ ಯೋಜನೆಗಳನ್ನು ರೂಪಿಸುತ್ತಿರುವ ಬಗ್ಗೆ ಸರಕಾರಕ್ಕೆ ಆಗಾಗ ವರದಿಗಳು ಲಭಿಸುತ್ತಿವೆ. ಆದ್ದರಿಂದ ನಮ್ಮ ನಾಗರಿಕರು ಜಾಗೂರೂಕರಾಗಿರಬೇಕು ಎಂದು ಅಮೆರಿಕಾ ತನ್ನ ಸಲಹೆಯಲ್ಲಿ ತಿಳಿಸಿದೆ.
ಅದೇ ವೇಳೆ ಪ್ರಮುಖವಾಗಿ ಹೋಟೆಲ್, ಮಾರ್ಕೆಟ್, ರೈಲ್ವೇ ನಿಲ್ದಾಣ ಮತ್ತು ಇತರ ಜನನಿಭಿಡ ಪ್ರದೇಶಗಳನ್ನು ಭಯೋತ್ಪಾದಕ ಸಂಘಟನೆಗಳು ಗುರಿಯಾಗಿಸಿದೆ. ವಿದೇಶೀಯರು ಅದರಲ್ಲೂ ಅಮೆರಿಕನ್ನರು ಭಯೋತ್ಪಾದಕರ ಪ್ರಮುಖ ಗುರಿಗಳಾಗಿದ್ದಾರೆ ಎಂದು ವರದಿ ತಿಳಿಸಿದೆ.
ಅಮೆರಿಕಾ ಪ್ರಜೆಗಳು ಅಥವಾ ಇತರ ದೇಶಗಳ ನಾಗರಿಕರು ತಂಗಿರುವ ಅಥವಾ ಭೇಟಿ ನೀಡುವ ಪ್ರದೇಶಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಅಥವಾ ಅವರ ಅನುಯಾಯಿಗಳು ಸಮರ್ಥರಾಗಿದ್ದು, ಇಂತಹ ಪ್ರಸಂಗಗಳನ್ನು ತಪ್ಪಿಸಿಕೊಳ್ಳಲು ಯತ್ನಿಸಬೇಕು ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ 2008ರ ಮುಂಬೈ ದಾಳಿಯ ನಂತರ 2010 ಫೆಬ್ರವರಿ ತಿಂಗಳಲ್ಲಿ ಪುಣೆಗೆ ದಾಳಿ ನಡೆಸಲಾಗಿತ್ತು. ಭಾರತವು ಉಗ್ರರ ಹಿಟ್ ಲಿಸ್ಟ್‌ನಲ್ಲಿದೆ ಎಂದು ಅಮೆರಿಕಾ ಆಗಾಗ ಹೇಳುತ್ತಾ ಬಂದಿದ್ದು, ಸಾಮಾನ್ಯ ಎಚ್ಚರಿಕೆಗಳನ್ನು ತನ್ನ ನಾಗರಿಕರಿಗೆ ನೀಡುತ್ತಾ ಬಂದಿದೆ.