ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಜತೆಗಿನ ಸಂಬಂಧದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ತಳೆದಿದ್ದ 'ಸ್ವತಂತ್ರ' ಹಾಗೂ ತಮ್ಮದೇ ಆದ ರೀತಿಯಲ್ಲಿ ಸಂಬಂಧ ವೃದ್ಧಿಸಿಕೊಳ್ಳಲು ಪ್ರಯತ್ನಿಸಿರುವುದೇ ಆಕೆಯ ಹತ್ಯೆಗೆ ಕಾರಣವಾಗಿರಬಹುದು ಎಂದು ವಿಶ್ವಸಂಸ್ಥೆಯ ತನಿಖಾ ಸಮಿತಿಯ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
2007ರ ಡಿಸೆಂಬರ್ 27ರಂದು ರಾವಲ್ಪಿಂಡಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ 54ರ ಹರೆಯದ ಭುಟ್ಟೊರನ್ನು ಹತ್ಯೆ ಮಾಡಲಾಗಿತ್ತು.
ಭುಟ್ಟೋ ಹತ್ಯೆಯನ್ನು ತಪ್ಪಿಸಬಹುದಾಗಿತ್ತು. ಆಗಿನ ಮಿಲಿಟರಿ ಸರ್ವಾಧಿಕಾರಿ ಫರ್ವೇಜ್ ಮುಶರಫ್ ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವುದು ಅಥವಾ ಭದ್ರತೆ ಒದಗಿಸಲು ನಿರ್ಲಕ್ಷ್ಮ ವಹಿಸಿರುವುದೇ ಹತ್ಯೆಗೆ ಕಾರಣ ವರದಿ ತಿಳಿಸಿದೆ.
ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ 65 ಪುಟಗಳ ತನಿಖಾ ವರದಿಯನ್ನು ವಿಶ್ವಸಂಸ್ಥೆಯ ಚಿಲಿ ರಾಯಭಾರಿ ಹೆರಾಲ್ಡೋ ಮನಾಜ್ ಸಲ್ಲಿಸಿದ್ದಾರೆ. ಮನಾಜ್ ನೇತೃತ್ವದ ಮೂರು ಮಂದಿ ಸದಸ್ಯರು ತನಿಖೆಯನ್ನು ಕೈಗೊಂಡಿದ್ದರು.
ಭುಟ್ಟೊ ಅವರ ಜೀವಕ್ಕೆ ಅಲ್-ಖೈದಾ, ಪಾಕಿಸ್ತಾನದ ತಾಲಿಬಾನ್ ಉಗ್ರರು ಮತ್ತು ಇತರ ಜೆಹಾದ್ ಸಂಘಟನೆಗಳಿಂದಲೂ ಅಪಾಯವಿತ್ತು ಎಂದು ವರದಿ ತಿಳಿಸಿದೆ.
ನೆರೆಯ ರಾಷ್ಟ್ರದ ಜೊತೆಗಿನ ಕಾಶ್ಮೀರ ವಿವಾದ ಸೇರಿದಂತೆ ಸಂಬಂಧ ವೃದ್ದಿಸಿಕೊಳ್ಳಲು ಭುಟ್ಟೋ ಯತ್ನಿಸಿದ್ದರು. ಇದು ರಾಜಕೀಯ ಎದುರಾಳಿಗಳ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ಹೇಳಲಾಗಿದೆ.