ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತನ್ನದೇ ಅಧಿಕಾರಕ್ಕೆ ಕತ್ತರಿ ಹಾಕುವ ಕಾಯಿದೆಗೆ ಜರ್ದಾರಿ ಸಹಿ (Pakistan | Asif Ali Zardari | Yousuf Raza Gilani | Pervez Musharraf)
ತನ್ನದೇ ಅಧಿಕಾರಕ್ಕೆ ಕತ್ತರಿ ಹಾಕುವ ಕಾಯಿದೆಗೆ ಜರ್ದಾರಿ ಸಹಿ
ಇಸ್ಲಾಮಾಬಾದ್, ಸೋಮವಾರ, 19 ಏಪ್ರಿಲ್ 2010( 12:24 IST )
ಸಂಸತ್ ವಿಸರ್ಜನೆ ಮತ್ತು ಪ್ರಧಾನ ಮಂತ್ರಿಯನ್ನು ವಜಾಗೊಳಿಸುವ ಹಕ್ಕುಗಳನ್ನೊಳಗೊಂಡ ತನ್ನದೇ ಅಧಿಕಾರದ ಹಕ್ಕುಗಳನ್ನು ಮೊಟಕುಗೊಳಿಸುವ ನೂತನ ಸಂವಿಧಾನಿಕ ತಿದ್ದುಪಡಿಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಸೋಮವಾರ ಸಹಿ ಹಾಕಲಿದ್ದಾರೆ.
ಇದೇ ತಿಂಗಳು ಸಂಸತ್ತಿನ ಕೆಳಮನೆ ಹಾಗೂ ಮೇಲ್ಮನೆಗಳಲ್ಲಿ ಅನುಮೋದನೆ ಪಡೆದುಕೊಂಡಿದ್ದ ಅಧಿನಿಯಮ 102 ಜಾರಿಗೆ ಬಂದಲ್ಲಿ 1973ರ ಪಾಕಿಸ್ತಾನದ ಸಂಸದೀಯ ಸಂವಿಧಾನವನ್ನು ಮಿಲಿಟರಿ ಸರ್ವಾಧಿಕಾರಿಗಳು ತಮಗಿಷ್ಟ ಬಂದಂತೆ ಬಳಸಿಕೊಳ್ಳಲು ಕಷ್ಟಸಾಧ್ಯವಾಗುತ್ತದೆ.
ಈ ಕಾಯ್ದೆಯಿಂದಾಗಿ ಫರ್ವೇಜ್ ಮುಶರಫ್ ಮತ್ತು ಜಿಯಾ ಉಲ್ ಹಕ್‌ರಂತಹ ಮಿಲಿಟರಿ ಸರ್ವಾಧಿಕಾರಿಗಳಿಗೆ ಅಧಿಕಾರವನ್ನು ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಮಾತ್ರವಲ್ಲದೆ ಅಲ್‌ಖೈದಾ ವಿರುದ್ಧ ಅಮೆರಿಕಾ ನೇತೃತ್ವದಲ್ಲಿ ಭಯೋತ್ಪಾದನೆ ವಿರುದ್ಧ ಯುದ್ಧ ನಡೆಸುತ್ತಿರುವ ಪರಮಾಣು ಶಕ್ತ ರಾಷ್ಟ್ರದ ರಾಜಕೀಯ ಅಸ್ಥಿರತೆಯೂ ಕೊನೆಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಸಂವಿಧಾನ ಈ ನೂತನ ತಿದ್ದುಪಡಿ ಮಸೂದೆಯು ಅಂಗೀಕಾರ ಪಡೆದಿರುವುದು ಪ್ರಜಾಪ್ರಭುತ್ವಕ್ಕೆ ಸಂದಿರುವ ಜಯ ಎಂದಿರುವ ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ, ಇದು ಪಾಕಿಸ್ತಾನದ ಸಂವಿಧಾನ ಚರಿತ್ರೆಯ ಮೈಲುಗಲ್ಲಾಗಲಿದೆ ಎಂದಿದ್ದರು.
ಈ ನೂತನ ಕಾಯಿದೆಯಿಂದ ಜರ್ದಾರಿಯವರ ಅಧಿಕಾರ ಹಕ್ಕುಗಳಿಗೆ ಕತ್ತರಿ ಬೀಳಲಿದೆ. ಕೇವಲ ನಾಮ ಮಾತ್ರಕ್ಕೆ ರಾಷ್ಟ್ರದ ಅಧ್ಯಕ್ಷರಾಗಲಿರುವ ಅವರು ಸೇನಾಪಡೆಗಳ ಮುಖ್ಯಸ್ಥರನ್ನು ಪ್ರಧಾನ ಮಂತ್ರಿಯ ಶಿಫಾರಸಿನ ಮೇಲೆ ನೇಮಕಗೊಳಿಸಲಿದ್ದಾರೆ. ಅಲ್ಲದೆ ರಾಷ್ಟ್ರೀಯ ಆಸ್ಲೆಂಬಿಯನ್ನು ವಿಸರ್ಜಿಸುವುದು ಮತ್ತು ಪ್ರಾಂತ್ಯದ ರಾಜ್ಯಪಾಲರುಗಳನ್ನು ನೇಮಕ ಮಾಡುವ ಅಧಿಕಾರಕ್ಕೂ ಕತ್ತರಿ ಬೀಳುತ್ತಿದ್ದು, ಪ್ರಧಾನ ಮಂತ್ರಿಯವರ ಸಲಹೆಯಂತೆ ನಡೆದುಕೊಳ್ಳಬೇಕಾಗುತ್ತದೆ.