ಬಾಹಾವಾಲ್‌ಪುರ್, ಸೋಮವಾರ, 19 ಏಪ್ರಿಲ್ 2010( 13:16 IST )
ಭಾರತದ ಗಡಿಭಾಗದಲ್ಲಿ ಪಾಕಿಸ್ತಾನದ ಮಿಲಿಟರಿ ಪಡೆ ಆರು ವಾರಗಳ ಕಾಲ ಮಿಲಿಟರಿ ತಾಲೀಮು ನಡೆಸಿದ್ದು, ಇದು ಭಾರತಕ್ಕೆ ತನ್ನ ಸಾಮರ್ಥ್ಯದ ಬಗ್ಗೆ ಪರೋಕ್ಷವಾಗಿ ನೀಡಿದ ಸಂದೇಶ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾನುವಾರ ಪಾಕಿಸ್ತಾನದ ಪೂರ್ವ ಪ್ರದೇಶದ ಬಾಹಾವಾಲ್‌ಪುರ್ ಸಮೀಪದ ಖೈಪುರ್ ಟಾಮೆವಾಲಿ ಎಂಬಲ್ಲಿ ಪಾಕಿಸ್ತಾನದ ಆರ್ಮಿ ಮತ್ತು ಪಾಕಿಸ್ತಾನ್ ಏರ್ ಫೋರ್ಸ್ (ಪಿಎಎಫ್) ಜಂಟಿಯಾಗಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಹಾಗೂ ದೇಶದ ಕೆಲವು ಹಿರಿಯ ಮುಖಂಡರ ಸಮ್ಮುಖದಲ್ಲಿ ತಮ್ಮ ಮಿಲಿಟರಿ ಸಾಮರ್ಥ್ಯದ ಕರಾಮತ್ತನ್ನು ಪ್ರದರ್ಶಿಸಿದರು.
ಶಸ್ತ್ರಸಜ್ಜಿತ ಮಿಲಿಟರಿ ಪಡೆ ಮತ್ತು ವೈಮಾನಿಕ ಪಡೆಗಳು ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಿ, ಪ್ರಧಾನಿ ಹಾಗೂ ದೇಶದ ಗಣ್ಯರ ಶಬ್ಬಾಸ್‌ಗಿರಿ ಪಡೆದವು. ಈ ಸಂದರ್ಭದಲ್ಲಿ ಪಾಕಿಸ್ತಾನ್ ಆರ್ಮಿ ಸ್ವದೇಶಿ ನಿರ್ಮಿತ ಅಲ್ ಖಾಲಿದ್ ಟ್ಯಾಂಕ್ಸ್ ಮತ್ತು ಅನ್ಜಾ ಮಾರ್ಕ್-2 ಮಿಸೈಲ್ ಅನ್ನು ಪ್ರದರ್ಶಿಸಿದರೆ, ಏರ್ ಫೋರ್ಸ್ ಅಮೆರಿಕ ನಿರ್ಮಿತ ಎಫ್-16ವಿಮಾನ ಸೇರಿದಂತೆ ದೇಶೀಯ ನಿರ್ಮಿತ ಜೆಎಫ್-17 ಥಂಡರ್ ಏರ್‌ಕ್ರಾಫ್ಟ್ ಅನ್ನು ಪ್ರದರ್ಶಿಸಿದವು.
ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ. ಆ ನಿಟ್ಟಿನಲ್ಲಿ ದೇಶದ ಮಿಲಿಟರಿ ಪಡೆಯನ್ನು ಸಶಕ್ತಗೊಳಿಸುವುದು ಅತ್ಯಗತ್ಯವಾಗಿದೆ. ಅಲ್ಲದೇ ಭಯೋತ್ಪಾದನೆಯ ವಿರುದ್ಧ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಗಿಲಾನಿ ಹೇಳಿದರು.
ಆರ್ಥಿಕವಾಗಿ, ರಾಷ್ಟ್ರೀಯ ಐಕ್ಯತೆ, ಒಮ್ಮತಾಭಿಪ್ರಾಯದಿಂದ ದೇಶ ಮುನ್ನಡೆಯಬೇಕಾಗಿದ್ದು, ಎಲ್ಲಾ ರೀತಿಯ ಬೆದರಿಕೆಯನ್ನು ಎದುರಿಸಲು ದೇಶ ಸಜ್ಜಾಗಬೇಕಾಗಿದೆ ಎಂದು ತಿಳಿಸಿದರು.