ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಹೆಸರಿನಲ್ಲಿ ಪ್ರಚೋದನಾಕಾರಿ ಇಸ್ಲಾಮಿಕ್ ವಿಚಾರಗಳನ್ನು ಹಂಚಿಕೊಂಡು ಒಂದು ಸಾವಿರಕ್ಕೂ ಹೆಚ್ಚು 'ಅಭಿಮಾನಿ'ಗಳನ್ನು ಗಿಟ್ಟಿಸಿಕೊಂಡಿದ್ದ ಖಾತೆಯನ್ನು ತೆಗೆದು ಹಾಕಲಾಗಿದೆ ಎಂದು ಸಾಮಾಜಿಕ ಸಂಪರ್ಕ ತಾಣ ಫೇಸ್‌ಬುಕ್ ತಿಳಿಸಿದೆ.
ಖ್ಯಾತ ಅಥವಾ ಕುಖ್ಯಾತ ವ್ಯಕ್ತಿಗಳ ಹೆಸರಿನಲ್ಲಿ ಜನ ನಕಲಿ ಖಾತೆಗಳನ್ನು ತೆರೆಯಲು ಆಗಾಗ ಯತ್ನಿಸುತ್ತಾರೆ. ಆದರೆ ಇಂತಹ ಬೆಳವಣಿಗೆಗಳನ್ನು ತಪ್ಪಿಸಲು ನಾವು ಕೆಲವು ತಾಂತ್ರಿಕ ಅಂಶಗಳನ್ನು ಹೊಂದಿದ್ದೇವೆ ಎಂದು ಫೇಸ್‌ಬುಕ್ ವಕ್ತಾರ ಆಂಡ್ರ್ಯೂ ನೋಯಿಸ್ ಭಾನುವಾರ ತನ್ನ ಇಮೇಲ್‌ನಲ್ಲಿ ತಿಳಿಸಿದ್ದಾರೆ.
ಕೆಲವು ಬಾರಿ ಇಂತಹ ನಕಲಿ ಖಾತೆಗಳು ಚಾಲನೆಗೊಳ್ಳಬಹುದು. ಆದರೆ ತಾವೇ ಒಸಾಮಾ ಬಿನ್ ಲಾಡೆನ್ ಅಥವಾ ಆತನ ಜತೆ ಸಂಬಂಧ ಹೊಂದಿದವರು ಎಂದು ಹೇಳುವುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲದೇ ಇದ್ದಾಗ ಅಂತಹಾ ಖಾತೆಗಳನ್ನು ಉಳಿಸಿಕೊಳ್ಳಲಾಗುವುದಿಲ್ಲ ಎಂದು ವಿವರಣೆ ನೀಡಿದ್ದಾರೆ.
ಅಲ್‌ಖೈದಾ ಬೆಂಬಲಿತ ಮಾಧ್ಯಮ 'ಅಲ್-ಸಾಹಬ್ ಮೀಡೀಯಾ ಗ್ರೂಪ್' ಸಿದ್ಧಪಡಿಸಿದ್ದ ಇಸ್ಲಾಂ ಭಯೋತ್ಪಾದನೆಗೆ ಸಂಬಂಧಿಸಿದ ಹಲವು ಧ್ವನಿ ಮುದ್ರಿಕೆಗಳು ಮತ್ತು ಭಾಷಣಗಳನ್ನು ಒಸಾಮಾ ಬಿನ್ ಲಾಡೆನ್ ಹೆಸರಿನಲ್ಲಿ ತೆರೆದಿದ್ದ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಅದನ್ನು ಶುಕ್ರವಾರವೇ ಸ್ಥಗಿತಗೊಳಿಸಲಾಗಿದೆ.
ಬಿನ್ ಲಾಡೆನ್‌ನನ್ನು 'ಮುಜಾಹಿದೀನ್ ರಾಜಕುಮಾರ' ಎಂದೇ ಬಣ್ಣಿಸಿದ್ದ ಈ ಪುಟವು, ಆತನ ವಾಸಸ್ಥಳವನ್ನು 'ಪ್ರಪಂಚದ ಪರ್ವತ ಪ್ರದೇಶ' ಎಂದು ನಮೂದು ಮಾಡಲಾಗಿತ್ತು ಎಂದು ಅರೇಬಿಕ್ ಭಾಷೆಯ ಸುದ್ದಿ ಸೈಟ್ 'ಇಲಾಫ್' ವರದಿ ಮಾಡಿತ್ತು.