ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ತನ್ನನ್ನು ಖುಲಾಸೆಗೊಳಿಸಬೇಕು ಎಂದು ಲಷ್ಕರ್ ಇ ತೋಯ್ಬಾ ಕಮಾಂಡರ್ ಝಾಕೀರ್ ರೆಹ್ಮಾನ್ ಲಖ್ವಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಫೆಡರಲ್ ಸರಕಾರಕ್ಕೆ ನೊಟೀಸ್ ಜಾರಿಗೊಳಿಸಿರುವ ಸುಪ್ರೀಂ ಕೋರ್ಟ್, ಏಪ್ರಿಲ್ 21ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ.
ಭಾರತದ ವಶದಲ್ಲಿರುವ ಅಜ್ಮಲ್ ಅಮೀರ್ ಕಸಬ್ ಬಲವಂತದ ತಪ್ಪೊಪ್ಪಿಗೆ ಹೊರತುಪಡಿಸಿ 2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ತನ್ನ ವಿರುದ್ಧ ಪ್ರಾಸಿಕ್ಯೂಷನ್‌ನಲ್ಲಿ ಯಾವುದೇ ಸಾಕ್ಷ್ಯಗಳು ಇಲ್ಲದೇ ಇರುವುದರಿಂದ ತನ್ನನ್ನು ಪ್ರಕರಣದಿಂದ ದೋಷಮುಕ್ತನನ್ನಾಗಿಸಬೇಕು ಎಂದು ಏಪ್ರಿಲ್ 7ರಂದು ಲಖ್ವಿ ಮನವಿ ಸಲ್ಲಿಸಿದ್ದಾನೆ.
ಕಸಬ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯನ್ನು ತನ್ನ ವಿರುದ್ಧ ಬಳಸದಂತೆ ಪ್ರಾಸಿಕ್ಯೂಷನ್ ಮತ್ತು ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ನಿರ್ಬಂಧ ವಿಧಿಸಬೇಕೆಂದೂ ಅಪೆಕ್ಸ್ ನ್ಯಾಯಾಲಯಕ್ಕೆ ಲಖ್ವಿ ಮನವಿ ಮಾಡಿಕೊಂಡಿದ್ದಾನೆ. ಮನವಿಯನ್ನು ಸುಪ್ರೀಂ ಕೋರ್ಟ್‌ನ ರಾವಲ್ಪಿಂಡಿ ಪೀಠವು ಏಪ್ರಿಲ್ 21ರಂದು ವಿಚಾರಣೆ ನಡೆಸಲಿದೆ.
ಆರು ಮಂದಿ ಸಹ ಆರೋಪಿಗಳು ಮತ್ತು ಮುಂಬೈ ನರಮೇಧದಲ್ಲಿ ಪಾಲ್ಗೊಂಡ ಇತರ ವ್ಯಕ್ತಿಗಳ ಜತೆ ಲಖ್ವಿ ಸಂಭಾಷಣೆ ನಡೆಸಿರುವ ಯಾವುದೇ ಆರೋಪವನ್ನು ಪ್ರಾಸಿಕ್ಯೂಷನ್ ಮಾಡಿಲ್ಲ ಎಂಬ ಅಂಶವನ್ನೂ ಭಯೋತ್ಪಾದಕ ಸಂಘಟನೆಯ ಮುಖಂಡನ ವಕೀಲ ಖ್ವಾಜಾ ಸುಲ್ತಾನ್ ನ್ಯಾಯಾಲಯದಲ್ಲಿ ಬೆಟ್ಟು ಮಾಡಿ ತೋರಿಸಿದ್ದಾರೆ.
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಪಿತೂರಿ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಲಖ್ವಿ ಮತ್ತು ಇತರ ಆರು ಮಂದಿ ಶಂಕಿತರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ರಾವಲ್ಪಿಂಡಿಯಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ನಡುವೆ ಲಖ್ವಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ.
ಅದೇ ಹೊತ್ತಿಗೆ ಪ್ರಾಸಿಕ್ಯೂಷನ್ ಮತ್ತೊಂದು ಪ್ರತ್ಯೇಕ ಮನವಿಯನ್ನು ಲಾಹೋರ್ ಹೈಕೋರ್ಟ್‌ನಲ್ಲಿ ಸಲ್ಲಿಸಿದೆ. ಕಸಬ್ ಮತ್ತು ಫಾಹಿಂ ಅನ್ಸಾರಿಯವರನ್ನು ತಲೆ ಮರೆಸಿಕೊಂಡಿರುವ ಅವರಾಧಿಗಳು ಎಂದು ಘೋಷಿಸಲು ಭಯೋತ್ಪಾದನಾ ವಿರೋಧಿ ನ್ಯಾಯಾಲಯ ವಿರೋಧಿಸಿರುವುದನ್ನು ಇಲ್ಲಿ ಪ್ರಶ್ನಿಸಲಾಗಿದೆ.