ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಕಂದಹಾರ್‌ನ ದಕ್ಷಿಣ ನಗರದ ಉಪ ಮೇಯರ್‌ರೊಬ್ಬರನ್ನು ಆಗಂತುಕರು ಗುಂಡಿಕ್ಕಿ ಕೊಂದಿರುವ ಘಟನೆ ಮಂಗಳವಾರ ನಡೆದಿದೆ.
ಮಸೀದಿಯಲ್ಲಿ ಉಪ ಮೇಯರ್ ಅಜೀಜುಲ್ಲಾ ಯಾರ್ಮಾಲ್ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಬಂಡುಕೋರರು ಒಳನುಗ್ಗಿ ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವುದಾಗಿ ಸ್ಥಳೀಯ ವಕ್ತಾರ ಜಾಲ್‌ಮೈ ಅಯ್ಯುಬಿ ತಿಳಿಸಿದ್ದು, ಈ ಸಂದರ್ಭದಲ್ಲಿ ಹಲವಾರು ಮಂದಿ ಪ್ರಾರ್ಥನೆಯಲ್ಲಿ ನಿರತರಾಗಿದ್ದರು ಎಂದು ವಿವರಿಸಿದ್ದಾರೆ.
ಉಪ ಮೇಯರ್ ಅಫ್ಘಾನಿಸ್ತಾನದ ಜನರ ಸೇವೆ ಮಾಡಬೇಕೆಂದು ನಿರ್ಧರಿಸಿದ್ದರು, ಆದರೆ ಆಗಂತುಕರು ಅವರನ್ನು ಬಲಿತೆಗೆದುಕೊಂಡಿದ್ದಾರೆ. ಇದು ಭಯೋತ್ಪಾದನಾ ಕೃತ್ಯಕ್ಕಿಂತ ಭಿನ್ನವಾದುದೇನಲ್ಲ ಎಂದು ನ್ಯಾಟೋದ ಹಿರಿಯ ನಾಗರಿಕ ಪ್ರತಿನಿಧಿ ಮಾರ್ಕ್ ಸೆಡ್‌ವಿಲ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಉಪ ಮೇಯರ್ ಅಜೀಜುಲ್ಲಾ ಅವರನ್ನು ಕೊಂದ ಆಗಂತುಕರು ಪರಾರಿಯಾಗಿದ್ದು, ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಅಯ್ಯುಬಿ ತಿಳಿಸಿದ್ದಾರೆ.