ಶ್ರೀಲಂಕಾ ಅಧ್ಯಕ್ಷ ಮಹೀಂದ ರಾಜಪಕ್ಸೆ ಅವರ ನಿಕಟವರ್ತಿ, ತೋಟಗಾರಿಕಾ ಸಚಿವ ಡಿ.ಎಂ.ಜಯರತ್ನೆ ಲಂಕಾದ ನೂತನ ಪ್ರಧಾನಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಗುರುವಾರ ನೂತನ ಸಂಸತ್‌ನ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ಜಯರತ್ನೆ ಅವರು ಬುಧವಾರವೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದಾಗಿ ಮೂಲಗಳು ತಿಳಿಸಿವೆ.
ಲಂಕಾದ ಆಡಳಿತಾರೂಢ ಫ್ರೀಡಂ ಪಕ್ಷದ ಹಿರಿಯ ಮುಖಂಡರಾಗಿರುವ ಜಯರತ್ನೆ ಅವರು ಅಧ್ಯಕ್ಷ ರಾಜಪಕ್ಸೆ ಅವರ ನಿಕಟವರ್ತಿಯಾಗಿದ್ದಾರೆ. ಈ ಮೊದಲು ಪ್ರಧಾನಿಯಾಗಿದ್ದ ರತ್ನಸಿರಿ ವಿಕ್ರಮಸಿಂಘೆ ಅವರ ಸ್ಥಾನವನ್ನು ಜಯರತ್ನೆ ಅವರು ಅಲಂಕರಿಸಿದಂತಾಗಿದೆ ಎಂದು ಅಧ್ಯಕ್ಷರ ಸಚಿವಾಲಯದ ಮೂಲಗಳು ಹೇಳಿವೆ.
ಜಯರತ್ನೆ (68)ಅವರನ್ನು ಲಂಕಾದ ಪ್ರಧಾನಿಯಾಗಿ ಆಯ್ಕೆ ಮಾಡಿದ ಕೆಲ ಹೊತ್ತಿನಲ್ಲಿಯೇ ಅಧ್ಯಕ್ಷ ರಾಜಪಕ್ಸೆ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಆಡಳಿತಾರೂಢ ಯುಪಿಎಫ್‌ಎ 225 ಸದಸ್ಯಬಲವುಳ್ಳ ವಿಧಾನಸಭಾ ಚುನಾವಣೆಯಲ್ಲಿ 144 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಏಪ್ರಿಲ್ 8ರಂದು ವಿಧಾನಸಭಾ ಚುನಾವಣೆ ನಡೆದಿತ್ತು.