ಪಾಕಿಸ್ತಾನ ವಿಶ್ವವಿದ್ಯಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಧ್ಯಾಪಕನ ಮೇಲೆ ಇಸ್ಲಾಮಿಕ್ ವಿದ್ಯಾರ್ಥಿಗಳ ಭಯೋತ್ಪಾದನಾ ಕೃತ್ಯಗಳಿಗೆ ಸಹಕಾರ ನೀಡುವ ಸಂಘಟನೆಯೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಪಾಕಿಸ್ತಾನದ ಅತಿದೊಡ್ಡ ಯುನಿವರ್ಸಿಟಿಯಲ್ಲಿ ಇದೇ ತಿಂಗಳು ತನ್ನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನುಗ್ಗಿದ್ದ ವಿದ್ಯಾರ್ಥಿಗಳ ಗುಂಪು ಬಾಗಿಲನ್ನು ಒಡೆದು ಉಕ್ಕಿನ ರಾಡುಗಳಿಂದ ಫ್ರೊಫೆಸರ್ ಮೇಲೆ ಹಲ್ಲೆ ನಡೆಸಿತ್ತು. ಬಳಿಕ ಅವರ ತಲೆಯನ್ನು ಹಿಡಿದು ಅಲ್ಲೇ ಇದ್ದ ಬೃಹತ್ ಹೂಕುಂಡದ ಮೇಲೆ ಬಡಿಯಲಾಗಿತ್ತು.
ಪರಿಸರ ವಿಜ್ಞಾನದ ಪ್ರಾಧ್ಯಾಪಕರಾದ ಇಫ್ತಿಕಾರ್ ಬಾಲೊಚ್ ಹಲ್ಲೆಗೀಡಾದ ವ್ಯಕ್ತಿಯಾಗಿದ್ದು, ಘಟನೆ ಹಿನ್ನೆಲೆಯಲ್ಲಿ ಇಸ್ಲಾಮಿಕ್ ವಿದ್ಯಾರ್ಥಿಗಳ ಸಂಘಟನೆಯ ಕೆಲವು ವಿದ್ಯಾರ್ಥಿಗಳನ್ನು ವಜಾಗೊಳಿಸಿದ್ದರು. ಹಲ್ಲೆ ನಂತರ ಇದರ ವಿರುದ್ಧ ಪ್ರಾಧ್ಯಾಪಕರ ಸಂಘಟನೆಯು ಮೂರು ವಾರಗಳ ನಿರಂತರ ಪ್ರತಿಭಟನೆ ನಡೆಸಿದ್ದು, ಸೋಮವಾರ ಅಂತ್ಯಗೊಳಿಸಲಾಗಿತ್ತು.
ಇಲ್ಲಿನ ಪ್ರಾಧ್ಯಾಪಕರ ಪ್ರಕಾರ 'ಇಸ್ಲಾಮಿ ಜಾಮೈತ್ ತಲಾಬಾ' ಎಂದು ಗುರುತಿಸಿಕೊಂಡಿರುವ ಈ ಗುಂಪು ನೈತಿಕ ಪೊಲೀಸರಂತೆ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಹಲ್ಲೆಗಳನ್ನು ನಡೆಸಿದೆ. ಈ ಸಂಘಟನೆಗೆ ರಾಷ್ಟ್ರದ ಪ್ರಮುಖ ರಾಜಕೀಯ ನಾಯಕರುಗಳು ಕೂಡ ಬೆಂಬಲ ನೀಡುತ್ತಿದ್ದಾರೆ. ಅವರ ರಾಜಕೀಯ ಬೇಳೆಗಳನ್ನು ಬೇಯಿಸಿಕೊಳ್ಳಲು ವಿದ್ಯಾರ್ಥಿಗಳು ಸಹಕಾರ ನೀಡುತ್ತಿರುವುದರಿಂದ ರಾಜಕಾರಣಿಗಳು ಕೂಡ ಇದಕ್ಕೆ ಬೆಂಬಲ ನೀಡುತ್ತಾರೆ ಎಂದು ತಿಳಿಸಿದ್ದಾರೆ.