ಮಕ್ಕಳಿಗೆ ಥಳಿಸಿದ್ದನ್ನು ಒಪ್ಪಿಕೊಂಡ ನಂತರ ಜರ್ಮನಿಯ ಅಗ್ರ ಬಿಷಪ್‌ಗಳಲ್ಲಿ ಒಬ್ಬರು ತನ್ನ ರಾಜೀನಾಮೆಯನ್ನು ಪೋಪ್ ಬೆನೆಡಿಕ್ಟ್ XVIಯವರಿಗೆ ಸಲ್ಲಿಸಿದ್ದಾರೆ ಎಂದು ಪತ್ರಿಕಾ ವರದಿಯೊಂದು ಗುರುವಾರ ತಿಳಿಸಿದೆ.
ದಕ್ಷಿಣ ಜರ್ಮನಿಯ ಆಗ್ಸ್‌ಬರ್ಗ್ ಬಿಷಪ್ ಹಾಗೂ ಜರ್ಮನ್ ಮಿಲಿಟರಿಯ ಬಿಷಪ್ ಕೂಡ ಆಗಿರುವ ವಾಲ್ಟರ್ ಮಿಕ್ಸಾ ತಾನು ರಾಜೀನಾಮೆ ಸಲ್ಲಿಸಲು ಸಿದ್ಧ ಎಂದು ಜರ್ಮನ್ ಸಂಜಾತ ಪೋಪ್‌ರಿಗೆ ಬುಧವಾರ ಪತ್ರ ಬರೆದಿದ್ದಾರೆ ಎಂದು ಸ್ಥಳೀಯ ಪತ್ರಿಕೆ 'ಅಗ್ಸ್‌ಬರ್ಗರ್ ಅಲ್ಗೆಮೀನ್' ವರದಿ ಮಾಡಿದೆ.
ಆದರೆ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಜರ್ಮನ್ ಬಿಷಪ್‌ಗಳ ಸಂಘಟನೆ ನಿರಾಕರಿಸಿದೆ. ಪೋಪ್ ಬೆನೆಡಿಕ್ಟ್ ಅವರು ರಾಜೀನಾಮೆಯನ್ನು ನೇರವಾಗಿ ಸ್ವೀಕರಿಸುತ್ತಾರೋ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಕಂಡು ಬಂದಿಲ್ಲ ಎಂದು ವರದಿಗಳು ಹೇಳಿವೆ.
1970 ಮತ್ತು 1980ರ ಸಂದರ್ಭದಲ್ಲಿ ರೋಮನ್ ಕ್ಯಾಥೊಲಿಕ್ ಅನಾಥಾಶ್ರಮದಲ್ಲಿನ ಮಕ್ಕಳಿಗೆ ಥಳಿಸಿದ್ದ ಆರೋಪಗಳನ್ನು ಆರಂಭದಲ್ಲಿ ನಿರಾಕರಿಸಿದ್ದ ಮಿಕ್ಸಾ, ನಂತರ ಒಪ್ಪಿಕೊಂಡು ಮಂಗಳವಾರವಷ್ಟೇ 'ತನ್ನನ್ನು ಕ್ಷಮಿಸಿಬಿಡಿ' ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು.
ಅದೇ ಹೊತ್ತಿಗೆ ಇವರ ಮೇಲೆ ಯಾವುದೇ ಲೈಂಗಿಕ ಕಿರುಕುಳ ಆಪಾದನೆಗಳಿಲ್ಲ.
ಜರ್ಮನಿ ಮತ್ತು ಇತರ ದೇಶಗಳಲ್ಲಿ ತಮಗೆ ಪಾದ್ರಿಗಳು ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರಿಕೊಳ್ಳುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ರೋಮನ್ ಕ್ಯಾಥೊಲಿಕ್ ಚರ್ಚುಗಳು ಭಾರೀ ಸುದ್ದಿಯಲ್ಲಿವೆ.