ಕಸ್ಟಡಿಯಿಂದ ಫೊನ್ಸೇಕಾ ಹೊರಕ್ಕೆ; ಸರಕಾರದ ವಿರುದ್ಧ ವಾಗ್ದಾಳಿ
ಕೊಲೊಂಬೊ, ಗುರುವಾರ, 22 ಏಪ್ರಿಲ್ 2010( 18:41 IST )
ಸಂಸತ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರಣದಿಂದ ಶ್ರೀಲಂಕಾ ಸೇನೆಯ ವಶದಲ್ಲಿರುವ ಮಾಜಿ ಸೇನಾ ಮುಖ್ಯಸ್ಥ ಸರತ್ ಫೊನ್ಸೇಕಾರನ್ನು ಕೊಂಚ ಹೊತ್ತು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಪ್ರಜಾಪ್ರಭುತ್ವಕ್ಕಾಗಿ ತಾನು ನಡೆಸುತ್ತಿರುವ ಹೋರಾಟವನ್ನು ತಡೆಯಲು ಯೋಜನೆ ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಎಲ್‌ಟಿಟಿಇ ವಿರುದ್ಧದ ಯುದ್ಧವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಸರತ್ ಫೊನ್ಸೇಕಾ ನಂತರದ ದಿನಗಳಲ್ಲಿ ಅಧ್ಯಕ್ಷ ಮಹೀಂದ್ರಾ ರಾಜಪಕ್ಷೆಯವರ ವಿರುದ್ಧ ತಿರುಗಿ ಬಿದ್ದಿದ್ದರು. ಬಳಿಕ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ವಿಫಲರಾಗಿದ್ದರು.
ಇದಾದ ತಕ್ಷಣವೇ ಅಧ್ಯಕ್ಷರು ಮತ್ತು ಅವರ ಕುಟುಂಬಿಕರ ಹತ್ಯೆಗೆ ಫೊನ್ಸೇಕಾ ಯತ್ನಿಸಿದ್ದಾರೆ ಎಂದು ಆರೋಪಿಸಿ ಸೇನೆ ಬಂಧಿಸಿತು. ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪವನ್ನೂ ಹೊತ್ತಿರುವ ಅವರು ಪ್ರಸಕ್ತ ಕೋರ್ಟ್ ಮಾರ್ಷಲ್ ಎದುರಿಸುತ್ತಿದ್ದಾರೆ.
ಎರಡು ವಾರಗಳ ಹಿಂದಷ್ಟೇ ನಡೆದಿದ್ದ ಸಂಸದೀಯ ಚುನಾವಣೆಗಳಲ್ಲಿ ಒಂದು ಸ್ಥಾನವನ್ನು ಗೆದ್ದಿರುವ ಫೊನ್ಸೇಕಾ ಅವರನ್ನು ಇಂದು ಅವರನ್ನು ಸಂಸತ್‌ನಲ್ಲಿ ಭಾಗವಹಿಸುವ ಸಲುವಾಗಿ ಕೊಂಚ ಸಮಯಗಳ ಕಾಲ ಬಿಡುಗಡೆ ಮಾಡಲಾಗಿತ್ತು.
ಸಂಸತ್ತಿನಿಂದಲೇ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಫೊನ್ಸೇಕಾ, ತಾನು ಇಲ್ಲೇ ರಾಜಪಕ್ಷೆಯವರ ವಿರುದ್ಧ ಟೀಕಾ ಪ್ರಹಾರ ನಡೆಸಬಹುದು. ಆದರೆ ಇದರಿಂದ ಸರಕಾರವು ನನ್ನ ಮೇಲೆ ಹಲವು ನಿರ್ಬಂಧಗಳನ್ನು ಹೇರುವ ನಿರ್ಧಾರಕ್ಕೆ ಬರಬಹುದು. ಇಂದು ಸಮಾರಂಭವಿದ್ದ ಕಾರಣ ನನ್ನನ್ನು ತಾತ್ಕಾಲಿಕವಾಗಿ ಮುಕ್ತಗೊಳಿಸಲಾಗಿದೆ. ಖಂಡಿತಾ ನಾನು ಪ್ರಜಾಪ್ರಭುತ್ವದ ಹೋರಾಟಕ್ಕಾಗಿ ಮತ್ತು ಸಂವಿಧಾನದ ರಕ್ಷಣೆಗಾಗಿ ಸಂಸತ್ತಿನಲ್ಲೇ ಹೋರಾಟ ನಡೆಸುತ್ತೇನೆ ಎಂದರು.
ಅವರು ನನ್ನನ್ನು ಅಪರಾಧಿಯನ್ನಾಗಿ ಮಾಡುವ ಉದ್ದೇಶ ಹೊಂದಿದ್ದಾರೆ. ಆ ಮೂಲಕ ಜೈಲಿಗೆ ಕಳುಹಿಸಿ ಸಂಸತ್‌ಗೆ ಬರದಂತೆ ತಡೆಯುವ ಏಕಮಾತ್ರ ಮಾರ್ಗವನ್ನು ಬಳಸುವ ಬಯಕೆಯನ್ನು ಹೊಂದಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.