ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಟಿಬೆಟ್‌ನ ಧಾರ್ಮಿಕ ಮುಖಂಡ ದಲೈಲಾಮಾ ಅವರು ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿಗಳಾಗಿದ್ದಾರೆಂದು ಆರು ರಾಷ್ಟ್ರಗಳಲ್ಲಿ ನಡೆಸಿದ ಜನಾಭಿಪ್ರಾಯ ಸಂಗ್ರಹದಿಂದ ತಿಳಿದುಬಂದಿದೆ ಎಂದು ವರದಿ ತಿಳಿಸಿದೆ.
ಆರು ದೇಶಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಬರಾಕ್ ಒಬಾಮಾ ಅವರು ಶೇ.77ರಷ್ಟು ಮತಪಡೆದು ಪ್ರಥಮ ಸ್ಥಾನಗಳಿದ್ದಾರೆ. ಇದು ಕಳೆದ ವರ್ಷ ನವೆಂಬರ್ ನಡೆಸಿದ ಜನಾಭಿಪ್ರಾಯಕ್ಕಿಂತ ಶೇ.1ರಷ್ಟು ಹೆಚ್ಚಳವಾಗಿದೆ ಎಂದು ಸಮೀಕ್ಷೆ ನಡೆಸಿದ ಹ್ಯಾರೀಸ್ ಇಂಟರಾಕ್ಟೀವ್ ಫಾರ್ ಫ್ರಾನ್ಸ್ 24 ಹಾಗೂ ರೇಡಿಯೋ ಫ್ರಾನ್ಸ್ ಶುಕ್ರವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ವಿವರಿಸಿದೆ.
ಅದೇ ರೀತಿ ಟಿಬೆಟ್‌ನ ಧಾರ್ಮಿಕ ನಾಯಕ ದಲೈಲಾಮಾ ಅವರು ಶೇ.75ರಷ್ಟು ಮತಗಳಿಸಿ ಎರಡನೇ ಸ್ಥಾನ ಪಡೆದಿದ್ದರೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಶೇ.62ಪಡೆದು ಮೂರನೇ ಸ್ಥಾನ ಅಲಂಕರಿಸಿದ್ದಾರೆ.
ಇನ್ನುಳಿದಂತೆ ವ್ಯಾಟಿಕನ್‌ನ ಪೋಪ್ ಬ್ಯಾನಡಿಕ್ಟ್ 16 ವಿಶ್ವದ 7ನೇ (ಶೇ.36) ಅತ್ಯಂತ ಪ್ರಭಾವಿ ಮುಖಂಡರಾಗಿದ್ದಾರೆಂದು ಸಮೀಕ್ಷೆ ತಿಳಿಸಿದೆ. ಜರ್ಮನ್ ಚಾನ್ಸಲರ್ ಏಂಜೆಲಾ ಮೆರ್ಕೆಲ್ (ಶೇ.54) ಅವರು ನಾಲ್ಕನೆ ಸ್ಥಾನ, ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಹಾಗೂ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ (ಶೇ.37) ಐದನೇ ಸ್ಥಾನ ಪಡೆದಿದ್ದಾರೆ.
ಹ್ಯಾರೀಸ್ ಇಂಟರಾಕ್ಟೀವ್ ಫಾರ್ ಫ್ರಾನ್ಸ್ 24 ಹಾಗೂ ರೇಡಿಯೋ ಫ್ರಾನ್ಸ್ ಜಂಟಿಯಾಗಿ ಇಂಟರ್ನೆಟ್ ಮೂಲಕ ಮಾರ್ಚ್ 31ರಿಂದ ಏಪ್ರಿಲ್ 12ರ ನಡುವೆ ನಡೆಸಿದ ಸಮೀಕ್ಷೆಯಲ್ಲಿ 16ರಿಂದ 64ರ ವಯಮಾನದ ಸುಮಾರು 6,135ಮಂದಿ ವೋಟ್ ಮಾಡುವ ಮೂಲಕ ಈ ಆಯ್ಕೆ ನಡೆಸಿದೆ. ಇದರಲ್ಲಿ ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೈನ್ ಹಾಗೂ ಅಮೆರಿಕದ ಜನರು ಭಾಗವಹಿಸಿದ್ದರು.