ಕಠಾರಿ ಧರಿಸಿ ಒಳಪ್ರವೇಶಿಸಲು ಬಿಡಲ್ಲ: ಸಿಖ್ ಮುಖಂಡನಿಗೆ ಕೋರ್ಟ್
ಟೊರಾಂಟೊ, ಶುಕ್ರವಾರ, 23 ಏಪ್ರಿಲ್ 2010( 15:32 IST )
ಯಾವುದೇ ಕಾರಣಕ್ಕೂ ಕಠಾರಿಯೊಂದಿಗೆ (ಚಾಕು) ನ್ಯಾಯಾಲದೊಳಕ್ಕೆ ಪ್ರವೇಶಿಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸಿಖ್ ಧಾರ್ಮಿಕ ಮುಖಂಡನಿಗೆ ಕೆನಡಾ ಕೋರ್ಟ್ ತಿಳಿಸಿದ್ದು, ಕಠಾರಿ ಧರಿಸುವುದು ಸಿಖ್ ಸಂಪ್ರದಾಯವಾಗಿದ್ದರೂ ಕೂಡ ಅದನ್ನು ಆಯುಧವಾಗಿ ಬಳಸಲಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯವ್ಯಕ್ತಪಡಿಸಿದೆ.
ಸಿಖ್ ಮುಖಂಡ ಸುಖ್‌ದೇವ್ ಸಿಂಗ್ ಕೋನೆರ್ ಕಠಾರಿ ಧರಿಸಿ ಕೋರ್ಟ್ ಪ್ರವೇಶಿಸಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶ್ರೇಷ್ಠ ನ್ಯಾಯಮೂರ್ತಿ ಸ್ಟೀವನ್ ರೋಜಿನ್, ಯಾವುದೇ ಕಾರಣಕ್ಕೂ ನ್ಯಾಯಾಲಯದೊಳಕ್ಕೆ ಕಠಾರಿಯೊಂದಿಗೆ ಪ್ರವೇಶಿಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಠಾರಿಯನ್ನು ಮುಖ್ಯವಾಗಿ ಸಂಭ್ರಮ ಅಥವಾ ಭಾವೋದ್ವೇಗದ ಪ್ರತೀಕವಾಗಿದೆ ಮತ್ತು ಗುರುದ್ವಾರದಲ್ಲಿನ ಸಂಭ್ರಮ, ಪೂಜೆ ಸಮಯದಲ್ಲಿ ಉಪಯೋಗಿಸುವ ಸಂಪ್ರದಾಯವಾಗಿದೆ. ಅಲ್ಲದೇ ಇದನ್ನು ಆಯುಧವನ್ನಾಗಿ ಸಿಖ್ ಸಮುದಾಯ ಉಪಯೋಗಿಸುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಆ ಹಿನ್ನೆಲೆಯಲ್ಲಿ ಕೋನೆರ್ ಕೋರ್ಟ್ ಹೊರಭಾಗದಲ್ಲಿಯೇ ಕಾನೂನಿನ ಪ್ರಕಾರ ಅನುಮತಿ ಪಡೆದು ಇಲ್ಲವೇ ಕಾಯ್ದೆಯಂತೆ ನ್ಯಾಯಾಲಯದೊಳಗೆ ಪ್ರವೇಶಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದರು.
ಕೆನಡಾದಲ್ಲಿ ರೈಲಿನಲ್ಲಿ ಸಂಚರಿಸುವ ಸಮಯದಲ್ಲಿ ಮಾತ್ರ ಸಿಖ್ ಸಮುದಾಯದವರು ಕಠಾರಿ ಬಳಸಲು ಅನುಮತಿ ಇದೆ. ಆದರೆ ವಿಮಾನದಲ್ಲಿ ಕಠಾರಿ ಧರಿಸಲು ಅನುಮತಿ ಇಲ್ಲ.