ವಾಯುವ್ಯ ಪಾಕಿಸ್ತಾನದ ಅಶಾಂತಿಯುತ ಒರಾಕ್ಜೈ ಬುಡಕಟ್ಟು ಕೇಂದ್ರಾಡಳಿತ ಪ್ರದೇಶದಾದ್ಯಂತ ತಾಲಿಬಾನ್ ಪರ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿಗಳ ನಡುವಿನ ಕಾಳಗದಲ್ಲಿ ಒಟ್ಟು 50 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
48 ತಾಲಿಬಾನ್ ಪರ ಉಗ್ರರು ಹಾಗೂ ಇಬ್ಬರು ಭದ್ರತಾ ಸಿಬ್ಬಂದಿಗಳು ಘಟನೆಯಲ್ಲಿ ಬಲಿಯಾಗಿದ್ದಾರೆ. 25 ಭಯೋತ್ಪಾದಕರು ಮತ್ತು ನಾಲ್ವರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಘಟನೆ ಈ ಪ್ರದೇಶದ ಮೂರು ವಿವಿಧ ಭಾಗಗಳಲ್ಲಿ ನಡೆದಿತ್ತು.
ಗಾಯಗೊಂಡಿರುವ ಮೂವರು ಭಯೋತ್ಪಾದಕರನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಒರಾಕ್ಜೈ ಪ್ರದೇಶದ ತಾಲಿಬಾನ್ ಅಭೇದ್ಯ ಕೋಟೆಗಳಾದ ಸಂಘ್ರಾ, ಖಾಂಬರ್ ಮಸಿ ಮತ್ತು ಮಶ್ತಿ ಮೇಲಾಗಳನ್ನು ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಳ್ಳಲು ಮುಂದಾದಾಗ ಭಯೋತ್ಪಾದಕರು ತಡೆಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘರ್ಷ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಶ್ತಿ ಮೇಲಾದಲ್ಲಿನ ಉಗ್ರ ಅಡಗುದಾಣಗಳತ್ತ ಭದ್ರತಾ ಪಡೆಗಳು ಗುರಿಯಿಟ್ಟು ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ 15 ಭಯೋತ್ಪಾದಕರು ಸತ್ತಿದ್ದಾರೆ.
ಸೇನೆಯು ಖಾಂಬಾರ್ ಮಾಸಿ ಪ್ರದೇಶವನ್ನೂ ವಶಕ್ಕೆ ಪಡೆದುಕೊಂಡಿದೆ.
ಒರಾಕ್ಜೈ ಪ್ರದೇಶದಲ್ಲಿರುವ ತಾಲಿಬಾನ್ ಭಯೋತ್ಪಾದಕರನ್ನು ಹೊರಗಟ್ಟಲು ಪಾಕಿಸ್ತಾನ ಕೈಗೊಂಡಿರುವ ಯುದ್ಧದಲ್ಲಿ ಕಳೆದ ಒಂದು ತಿಂಗಳಿನಿಂದ ಸುಮಾರು 350ರಷ್ಟು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಪಡೆಗಳು ಹೇಳಿಕೊಂಡಿವೆ.