ಬುರ್ಖಾ ಧರಿಸಿ ಕಾರು ಚಲಾಯಿಸುತ್ತಿದ್ದ ಮುಸ್ಲಿಮ್ ಮಹಿಳೆಯೊಬ್ಬಳಿಗೆ ಪೊಲೀಸರು 22ಯುರೋ (29ಯುಎಸ್ ಡಾಲರ್) ನಷ್ಟು ದಂಡ ವಿಧಿಸಿರುವ ಘಟನೆ ಫ್ರಾನ್ಸ್‌ನ ನಾನ್‌ಟೆಸ್ ನಗರದಲ್ಲಿ ಶುಕ್ರವಾರ ನಡೆದಿರುವುದಾಗಿ ಯುರೋಪ್ 1 ರೇಡಿಯೋ ವರದಿ ತಿಳಿಸಿದೆ.
ಬುರ್ಖಾ ಧರಿಸಿ ಕಾರು ಚಲಾಯಿಸುತ್ತಿದ್ದಾಕೆಯನ್ನು ತಡೆದು ನಿಲ್ಲಿಸಿದ ಪೊಲೀಸರು, ಆಕೆಯ ಗುರುತು ಪತ್ತೆಯ ತಪಾಸಣೆ ನಡೆಸಿದ್ದರು. ಅಲ್ಲದೇ ಆಕೆ ಪೂರ್ಣ ಪ್ರಮಾಣದಲ್ಲಿ ಬುರ್ಖಾ ಧರಿಸಿ ಕಾರು ಚಲಾಯಿಸುತ್ತಿದ್ದಕ್ಕೆ ದಂಡ ವಿಧಿಸಿರುವುದಾಗಿ ವರದಿ ಹೇಳಿದೆ.
ದಂಡಕ್ಕೆ ಒಳಗಾಗಿರುವ 31ರ ಹರೆಯದ ಮಹಿಳೆ, ಕಳೆದ ಒಂಬತ್ತು ವರ್ಷಗಳಿಂದ ಬುರ್ಖಾ ಧರಿಸುತ್ತಿರುವುದಾಗಿ ತಿಳಿಸಿದ್ದು, ಈ ರೀತಿ ದಂಡ ವಿಧಿಸುವುದು ಪಕ್ಷಪಾತದ ಧೋರಣೆಯಾಗಿದೆ. ಆ ನಿಟ್ಟಿನಲ್ಲಿ ಈ ಬಗ್ಗೆ ತಾನು ದೂರು ನೀಡಲು ಇಚ್ಛಿಸಿರುವುದಾಗಿ ತಿಳಿಸಿದ್ದಾರೆ.
ಫ್ರಾನ್ಸ್ ಇತ್ತೀಚೆಗಷ್ಟೇ ಪೂರ್ಣ ಪ್ರಮಾಣದಲ್ಲಿ ಬುರ್ಖಾ ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ನಿಷೇಧಿಸಿ ನೂತನ ಕಾನೂನನ್ನು ಜಾರಿಗೆ ತಂದಿತ್ತು. ಆ ನಿಟ್ಟಿನಲ್ಲಿ ಫ್ರಾನ್ಸ್‌ನಲ್ಲಿ ಮುಸ್ಲಿಮ್ ಮಹಿಳೆಯರು ಸಾರ್ವಜನಿಕವಾಗಿ ಬುರ್ಖಾ ಧರಿಸಿ ಸಂಚರಿಸುವುದು ಕಾನೂನು ರೀತ್ಯಾ ಅಪರಾಧವಾಗಿದೆ.