ಮಸೀದಿಯಲ್ಲಿ ಪ್ರಾರ್ಥನೆ ನಿರತ ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ಉಗ್ರರು ನಡೆಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಸುಮಾರು 58ಮಂದಿ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಇರಾಕ್‌ನ ಇಬ್ಬರು ಪ್ರಮುಖ ಅಲ್ ಖಾಯಿದಾ ಮುಖಂಡರನ್ನು ಮಿಲಿಟರಿ ಕಾರ್ಯಾಚರಣೆಯಲ್ಲಿ ಹತ್ಯೆಗೈಯಲಾಗಿದೆ ಎಂಬ ಅಧಿಕೃತ ಘೋಷಣೆಯ ನಂತರ ಉಗ್ರರು ಈ ಪ್ರತೀಕಾರ ತೀರಿಸಿಕೊಂಡಿದ್ದಾರೆ.
ಬಾಗ್ದಾದ್‌ನ ಶಿಯಾ ಮುಸ್ಲಿಮ್ ಪ್ರಾಬಲ್ಯವುಳ್ಳ ಸಾದಾರ್ ನಗರದ ಏಳು ಕಡೆ ಸರಣಿ ಬಾಂಬ್ ಸ್ಫೋಟಿಸುವ ಮೂಲಕ ಇರಾಕಿ ಶಿಯಾಗಳಿಗೆ ಇಂದು ಬ್ಲ್ಯಾಕ್ ಪ್ರೈಡೇ ಆಗಿ ಪರಿಣಮಿಸಿದೆ.
ಪ್ರಾರ್ಥನೆ ನಿರತ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿರಿಸಿ ಈ ಸ್ಫೋಟ ನಡೆಸಲಾಗಿದೆ ಎಂದು ಬಾಗ್ದಾದ್ ಭದ್ರತಾ ವಕ್ತಾರ ಮೇಜರ್ ಜನರಲ್ ಖ್ವಾಸ್ಸೀಮ್ ಅಲ್ ಮೌಸ್ಸಾಮಿ ತಿಳಿಸಿದ್ದಾರೆ. ಅಲ್ ಖಾಯಿದಾ ಉಗ್ರರನ್ನು ಹತ್ಯೆಗೈದಿದ್ದಕ್ಕೆ ಪ್ರತೀಕಾರ ಕೈಗೊಂಡಿರುವುದಾಗಿ ಅಭಿಪ್ರಾಯವ್ಯಕ್ತಪಡಿಸಿರುವ ಅವರು, ಈ ದಾಳಿ ಮತ್ತಷ್ಟು ಮುಂದುವರಿಯುವ ಸಾಧ್ಯತೆ ಇರುವುದಾಗಿ ಶಂಕಿಸಿದ್ದಾರೆ.
ಕಳೆದ ಭಾನುವಾರ ಇರಾಕ್‌ನ ಅಲ್ ಖಾಯಿದಾದ ಮುಖಂಡರಾದ ಅಬು ಅಯ್ಯುಬ್ ಅಲ್ ಮಾಸಾರಿ ಹಾಗೂ ಅಬು ಓಮರ್ ಅಲ್ ಬಾಗ್ದಾದಿಯನ್ನು ಇರಾಕ್ ಮತ್ತು ಅಮೆರಿಕ ಪಡೆ ಹತ್ಯೆಗೈದಿತ್ತು.
ಮೊದಲು ಸಂಭವಿಸಿದ ಸ್ಫೋಟದಲ್ಲಿ 25ಮಂದಿ ಸಾವನ್ನಪ್ಪಿದ್ದು, ನೂರು ಜನರು ಗಾಯಗೊಂಡಿದ್ದು, ಅವರನ್ನೆಲ್ಲಾ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಸ್ಫೋಟದಲ್ಲಿ ಅಂದಾಜು 33ಮಂದಿ ಬಲಿಯಾಗಿದ್ದಾರೆಂದು ಅಧಿಕಾರಿಗಳು ವಿವರಿಸಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿ ಹೇಳಿದ್ದಾರೆ.